ಚೆನ್ನೈನಲ್ಲಿ ‘ಚಿನ್ನಮ್ಮ’ ಶಕ್ತಿಪ್ರದರ್ಶನ ಬೆಂಬಲಿಗರ ಸಭೆಯಲ್ಲಿ 130 ಶಾಸಕರು ಹಾಜರ್

►ಅಜ್ಞಾತ ಸ್ಥಳಕ್ಕೆ ಶಶಿಕಲಾ ಬೆಂಬಲಿಗ ಶಾಸಕರ ಪ್ರಯಾಣ
►ರಾಜ್ಯಪಾಲರ ಆಗಮನ ವಿಳಂಬವಾದಲ್ಲಿ ರಾಷ್ಟ್ರಪತಿ ಎದುರು ಶಾಸಕರ ಪೆರೇಡ್ ಸಾಧ್ಯತೆ
►ರಾಜ್ಯಪಾಲ ವಿದ್ಯಾಸಾಗರ್ ನಡೆ ಇನ್ನೂ ನಿಗೂಢ
►134 ಶಾಸಕರ ಪೈಕಿ 131 ಮಂದಿ ಶಶಿಕಲಾ ಸಭೆಗೆ ಹಾಜರ್
►ದಿಲ್ಲಿಯಲ್ಲಿ ಎಡಿಎಂಕೆ ಎಂಪಿಗಳಿಂದ ರಾಷ್ಟ್ರಪತಿ ಭೇಟಿ; ಮುಖ್ಯಮಂತ್ರಿಯಾಗಿ ಶಶಿಕಲಾ ಪ್ರಮಾಣ ಸ್ವೀಕರಿಸಲು ಅವಕಾಶ ನೀಡುವಂತೆ ಒತ್ತಾಯ
ಚೆನ್ನೈ,ಫೆ.8: ಮುಖ್ಯಮಂತ್ರಿ ಹುದ್ದೆಯೇರುವ ಸನ್ನಾಹದಲ್ಲಿರುವ ‘ಚಿನ್ನಮ್ಮ’ ಶಶಿಕಲಾ ವಿರುದ್ಧ ಹಂಗಾಮಿ ಸಿಎಂ ಪನ್ನೀರ್‌ಸೆಲ್ವಂ ಬಂಡಾಯದ ಬಾವುಟ ಹಾರಿಸಿದ ಬೆನ್ನಲ್ಲೇ, ತಮಿಳುನಾಡಿನಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ಗರಿಗೆದರಿವೆ. ಬುಧವಾರ ಬೆಳಗ್ಗೆ ಶಶಿಕಲಾ ಕರೆದಿದ್ದ ಸಭೆಯಲ್ಲಿ 134 ಎಡಿಎಂಕೆ ಶಾಸಕರ ಪೈಕಿ 131 ಮಂದಿ ಭಾಗವಹಿಸಿ, ಆಕೆಗೆ ತಮ್ಮ ಬೆಂಬಲವನ್ನು ಘೋಷಿಸಿದರು. ಸಭೆಯಲ್ಲಿ ಶಶಿಕಲಾ, ಪನ್ನೀರ್ ಸೆಲ್ವಂ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಅವರೊಬ್ಬ ಸುಳ್ಳುಗಾರನಾಗಿದ್ದು, ತನ್ನ ಪಕ್ಷ ಹಾಗೂ ದಿವಂಗತ ನಾಯಕಿಗೆ ದ್ರೋಹವೆಸಗಿದ್ದಾರೆಂದು ಆಪಾದಿಸಿದ್ದಾರೆ.
ಎಡಿಸಭೆಯ ಬಳಿಕ ಎಡಿಎಂಕೆಯ ಎಲ್ಲಾ 130 ಶಾಸಕರನ್ನು ರಹಸ್ಯವಾಗಿ ಅಜ್ಞಾತ ಸ್ಥಳಕ್ಕೆ ಕೊಂಡೊಯ್ಯಲಾಗಿದೆ. ಈ ಶಾಸಕರನ್ನು ಹೊಟೇಲೊಂದರಲ್ಲಿ ಇರಿಸಲಾಗಿದೆಯೆಂದು ಮೂಲಗಳು ತಿಳಿಸಿದೆ.
ಈ ಮಧ್ಯೆ ಶಶಿಕಲಾ ಹಾಗೂ ಅವರ ಬೆಂಬಲಿಗ ಶಾಸಕರು, ತಮಗೆ ಹೊಸದಿಲ್ಲಿಯಲ್ಲಿ ರಾಷ್ಟ್ರಪತಿಯವರನ್ನು ಭೇಟಿಯಾಗಲು ಅವಕಾಶ ನೀಡುವಂತೆ ಕೋರಿ ಮನವಿ ಸಲ್ಲಿಸಿರುವುದಾಗಿ ತಿಳಿದುಬಂದಿದೆ.ರಾಜ್ಯಪಾಲರು ಚೆನ್ನೈಗೆ ಆಗಮಿಸುವವರೆಗೆ ಈ ಎಲ್ಲಾ ಶಾಸಕರನ್ನು ರಹಸ್ಯ ತಾಣದಲ್ಲಿರಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಎಂಕೆ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆಯಾಗಿರುವ ಶಶಿಕಲಾ, ಚೆನ್ನೈನಲ್ಲಿ ರಾಜ್ಯಪಾಲರ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ವಿಳಂಬವಾಗಿದೆ. ಈ ಮಧ್ಯೆ ತನ್ನಿಂದ ಶಶಿಕಲಾ ಬೆಂಬಲಿಗರು ಬಲವಂತವಾಗಿ ರಾಜೀನಾಮೆ ಪಡೆದುಕೊಂಡಿದ್ದಾರೆಂದು ಪನ್ನೀರ್‌ಸೆಲ್ವಂ ಆರೋಪಿಸಿರುವುದು, ಬಿಕ್ಕಟ್ಟನ್ನು ಇನ್ನಷ್ಟು ಜಟಿಲಗೊಂಡಿದೆ.
ಇಂದು ಬೆಳಗ್ಗೆ ಎಡಿಎಂಕೆ ಪ್ರಧಾನ ಕಾರ್ಯಾಲಯದಲ್ಲಿ ನಡೆದ ಶಾಸಕರ ಸಭೆಯಲ್ಲಿ ಶಶಿಕಲಾ ನಟರಾಜನ್ ಮಾತನಾಡಿ, ಪಕ್ಷದ ಏಕತೆಯನ್ನು ಒಡೆಯಲು ಯಾವುದೇ ಶಕ್ತಿಗೂ ಸಾಧ್ಯವಿಲ್ಲವೆಂದರು.
ತನಗೆ ಪಕ್ಷದ ಎಲ್ಲಾ ಕಾರ್ಯಕರ್ತರು ಹಾಗೂ ರಾಜ್ಯದ ಜನತೆಯ ಬೆಂಬಲವಿರುವುದಾಗಿ ಹೇಳಿದ ಶಶಿಕಲಾ, ‘ಅಮ್ಮಾ’ ತೋರಿದ ದಾರಿಯಲ್ಲಿ ಸಾರುವುದಾಗಿ ಘೋಷಿಸಿದರು. ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನಿಂದಿರುವಂತೆಯೂ ಆಕೆ ಕರೆ ನೀಡಿದರು.
ಎಡಿಎಂಕೆ ಖಜಾಂಚಿ ಹುದ್ದೆಯಿಂದ ತನ್ನನ್ನು ಉಚ್ಚಾಟಿಸಿದ ಒಂದು ದಿನದ ಬಳಿಕ ಪನ್ನೀರ್‌ಸೆಲ್ವಂ ಪತ್ರಿಕಾಗೋಷ್ಠಿಯೊಂದಲ್ಲಿ ಮುಖ್ಯಮಂತ್ರಿ ಹುದ್ದೆಗೆ ತನ್ನಿಂದ ಬಲವಂತದಿಂದ ರಾಜೀನಾಮೆ ಪಡೆಯಲಾಗಿತ್ತೆಂದವರು ಆರೋಪಿಸಿದ್ದರು.
ಸುಪ್ರೀಂ ತೀರ್ಪಿಗಾಗಿ ಕಾಯುತ್ತಿರುವ ರಾಜ್ಯಪಾಲ?
ಜಯಲಲಿತಾ ಅವರನ್ನೊಳಗೊಂಡ ಆದಾಯ ಮೀರಿದ ಆಸ್ತಿ ಪ್ರಕರಣದಲ್ಲಿ ಶಶಿಕಲಾ ಅವರು ಎರಡನೆ ಆರೋಪಿಯಾಗಿದ್ದಾರೆ. ಪ್ರಕರಣದ ತೀರ್ಪು ಈ ವಾರದೊಳಗೆ ಹೊರಬೀಳುವ ಸಾಧ್ಯತೆಯಿದು. ನ್ಯಾಯಾಲಯವು ಶಶಿಕಲಾ ತಪ್ಪಿತಸ್ಥೆಯೆಂದು ತೀರ್ಪು ನೀಡಿದಲ್ಲಿ, ಆಕೆಗೆ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದ್ದು, ಆಗ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಲು ಅವರಿಗೆ ಅಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ನ ತೀರ್ಪಿನ ಬಳಿಕವೇ ರಾಜ್ಯಪಾಲರು ತಮ್ಮ ಮುಂದಿನ ನಡೆಯನ್ನು ಪ್ರಕಟಿಸುವುದು ಬಹುತೇಕ ಖಚಿತವಾಗಿದೆ.







