ಎಡ್ವರ್ಡ್ ರೆಬೆಲ್ಲೋ ಅವರಿಗೆ "ಕೃಷಿ ಬಂಧು" ಪ್ರಶಸ್ತಿ

ಮೂಡುಬಿದಿರೆ, ಫೆ.8: ಮುಂಬಯಿಯ ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನವು ನೀಡುವ ಪ್ರತಿಷ್ಠಿತ ಕೃಷಿ ಬಂಧು ಪ್ರಶಸ್ತಿಗೆ ಮೂಡುಬಿದಿರೆ ತಾಕೋಡೆಯ ಎಡ್ವರ್ಡ್ ರೆಬೆಲ್ಲೋ ಅವರು ಆಯ್ಕೆಯಾಗಿದ್ದಾರೆ.
ಕೃಷಿಯಲ್ಲಿ ಅವರ ಅಪಾರ ಜ್ಞಾನ, ಅದನ್ನು ಇತರರೊಂದಿಗೆ ಹಂಚಿಕೊಳ್ಳುವ ಗುಣ, ಕಡಿಮೆ ಜಾಗದಲ್ಲಿ ವೈವಿಧ್ಯಮಯ ಕೃಷಿ ಮೊದಲಾದ ಸಾಧನೆಗಳನ್ನು ಗುರುತಿಸಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತ್ತಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಕಡಂದಲೆ ಸುರೇಶ ಭಂಡಾರಿ ಮತ್ತು ಪ್ರಧಾನ ಸಂಚಾಲಕ ವಿಶ್ವನಾಥ ದೊಡ್ಮನಿ ಅವರು ತಿಳಿಸಿದ್ದಾರೆ.
ಶೇಖರ ಅಜೆಕಾರು ಸಹಿತ ಐವರು ತಜ್ಞರ ಸಮಿತಿಯ ಶಿಫಾರಸ್ಸಿನಂತೆ ನಗದು ಸಹಿತ ಪ್ರಶಸ್ತಿಯನ್ನು ಫೆ.11 ರಂದು ಮುದ್ರಾಡಿಯಲ್ಲಿ ನಡೆಯುವ 8 ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಕೃಷಿಗೋಷ್ಠಿಯಲ್ಲಿ ಪ್ರದಾನಿಸಲಾಗುತ್ತಿದೆ.
ಧಾರವಾಡದ ಕೃಷಿ ಮಾಧ್ಯಮ ಕೇಂದ್ರವು ಅವರ ಸಾಧನೆಯನ್ನು "ಗಿಡಗೆಳೆತನದಿಂದ ಕೃಷಿ ಪ್ರೀತಿ ಬೆಳೆಸುವ ಎಡ್ವರ್ಡ್ ರೆಬೆಲ್ಲೋ (ಲೇ.ನಾ. ಕಾರಂತ ಪೆರಾಜೆ) ಕೃತಿಯನ್ನು ಹೊರ ತಂದು ಗೌರವ ಸಲ್ಲಿಸಿದೆ.
ಕೃಷಿಯಲ್ಲಿನ ಪ್ರತಿ ವಿಚಾರವನ್ನೂ ಸೂಕ್ಷ್ಮವಾಗಿ ಗಮನಿಸುವ, ತಳಿ ಸಂಗ್ರಹಿಸಿದಷ್ಟೆ ಶ್ರದ್ಧೆಯಿಂದ ಬೆಳೆ ಬೆಳೆಯುವ, ಉಪಯುಕ್ತ ಮಾಹಿತಿಯನ್ನು ಆಸಕ್ತರಿಗೆ ಹಂಚುವ " ಕೃಷಿಯಿಂದ ಲಾಭವೆಂದು ಹೇಳಲಾಗದಿದ್ದರೂ, ಮನಸ್ಸಿನ ಖುಷಿ. ಮನೆಯ ನೆಮ್ಮದಿ ಏರುಗತಿಯಲ್ಲಿದೆ " ಎಂದು ಹೇಳುವ ಎಡ್ವರ್ಡ್ ಅವರು ಮಾತುಗಳ ಅವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.
ತೋಟಗಾರಿಕಾ ಪಿತಾಮಹಾ ಡಾ. ಎಂ.ಎಚ್. ಮರಿಗೌಡ ಸ್ಮಾರಕ ರಾಜ್ಯ ಮಟ್ಟದ ಅತ್ಯುತ್ತಮ ತೋಟಗಾರಿಕಾ ಪ್ರಶಸ್ತಿ, ಧಾರವಾಡ ಕೃಷಿ ಮಾಧ್ಯಮ ಕೇಂದ್ರ ದಶಮಾನ ಪುರಸ್ಕಾರ, ಕರ್ನಾಟಕ ರಾಜ್ಯ ರೈತ ಸಂಘದ ಪ್ರಶಸ್ತಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೃಷಿ ವಿಚಾರ ವಿನಿಮಯ ಕೇಂದ್ರ, ತಾಕೋಡೆ ಚರ್ಚ್, ತಾಕೋಡೆ ವ್ಯವಸಾಯ ಸೇವಾ ಸಹಕಾರ ಸಂಘ ಸೇರಿದಂತೆ ಅನೇಕ ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ. ಆಕಾಶವಾಣಿ ಮಂಗಳೂರು ಕೇಂದ್ರದ ಅತ್ಯುತ್ತಮ ಕೇಳುಗ ಪ್ರಶಸ್ತಿ, ಈ ಟಿವಿಯ ಅನ್ನದಾತ ಪ್ರಶ್ನಾ ಮಂಜರಿ ಬಹುಮಾನ ಲಭಿಸಿದೆ.
ಒಡಿಯೂರು ಕೃಷಿ ಜಾತ್ರೆಯಲ್ಲಿ ಸ್ವಾಮಿಜಿಯವರು ಪ್ರಶಸ್ತಿ ನೀಡಿದ್ದಾರೆ. 7 ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನವು ಕರ್ನಾಟಕ ಕೃಷಿಕ ರತ್ನ" ಗೌರವ ನೀಡಿದೆ.







