ಕೆಲ ದಿನಗಳ ಹಿಂದಷ್ಟೆ ಜಾಮೀನಿನ ಮೇಲೆ ಹೊರಬಂದಿದ್ದ ರೌಡಿಯ ಬರ್ಬರ ಹತ್ಯೆ!

ಶಿವಮೊಗ್ಗ, ಫೆ. 8: ರೌಡಿ ಶೀಟರ್ ಓರ್ವನನ್ನು ಚೂರಿಯಿಂದ ಇರಿದು ಹತ್ಯೆ ಮಾಡಿರುವ ಘಟನೆ ಬುಧವಾರ ಸಂಜೆ ನಗರದ ಅಣ್ಣಾ ನಗರ ಬಡಾವಣೆಯಲ್ಲಿ ವರದಿಯಾಗಿದೆ.
ಬಚ್ಚಾ (23) ಹತ್ಯೆಗೀಡಾದ ರೌಡಿ ಎಂದು ಗುರುತಿಸಲಾಗಿದೆ. ಈತ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಆಗಮಿಸಿದ ಸುಮಾರು ಮೂರು ಜನರಿದ್ದ ಹಂತಕರ ತಂಡ ಚೂರಿಯಿಂದ ಇರಿದಿದ್ದು, ಗಂಭೀರವಾಗಿ ಗಾಯಗೊಂಡ ಜಮೀರ್ ಸ್ಥಳದಲ್ಲಿಯೇ ಅಸುನೀಗಿದ್ದಾನೆ ಎಂದು ತಿಳಿದುಬಂದಿದೆ.
ಹಳೇಯ ವೈಷಮ್ಯದ ಹಿನ್ನೆಲೆಯಲ್ಲಿ ಎದುರಾಳಿ ರೌಡಿ ತಂಡದವರು ಈ ಕೃತ್ಯ ನಡೆಸಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಧಿಸಲಾಗಿತ್ತು: 13-10-2016 ರಂದು ಕೊಲೆಗೀಡಾದ ರೌಡಿ ಬಚ್ಚಾ ಮತ್ತವನ ಸಹಚರರು ನಗರದ ವಿವಿಧೆಡೆ ದಾಂಧಲೆ ನಡೆಸಿದ್ದರು. ಸಾಗರ ರಸ್ತೆಯ ಪ್ರವಾಸಿ ಮಂದಿರದ ಬಳಿ ಇಮ್ರಾನ್ ಎಂಬುವರ ಬೈಕ್ ಅಡ್ಡಗಟ್ಟಿ, ಬೈಕ್‌ಗೆ ಬೆಂಕಿ ಹಚ್ಚಿದ್ದರು. ತದನಂತರ ಆರ್.ಎಂ.ಎಲ್. ನಗರದಲ್ಲಿ ನಡೆದುಕೊಂಡು ಬರುತ್ತಿದ್ದ ಶಾಹೀದ್ ಬಾಷಾ ಎಂಬುವರಿಗೆ ಚಾಕುವಿನಿಂದ ಇರಿದಿದ್ದರು. ಕ್ಲಾರ್ಕ್ ಪೇಟೆಯಲ್ಲಿ ಸಾರ್ವಜನಿಕರಿಗೆ ರಿವಾಲ್ವಾರ್, ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ ಭಯ ಸೃಷ್ಟಿಸಿದ್ದರು.
ಈ ಕೃತ್ಯಗಳ ನಂತರ ಬಚ್ಚೆ ಸೇರಿದಂತೆ ಎಲ್ಲ ಆರೋಪಿಗಳು ತಲೆಮರೆಸಿಕೊಂಡಿದ್ದರು. ಈ ಕುರಿತಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ವಿಶೇಷ ಪೊಲೀಸ್ ತಂಡ ರಚನೆ ಮಾಡಿದ್ದರು. ಈ ತಂಡವು ಮುಂಬೈ ಮತ್ತೀತರೆಡೆ ಆರೋಪಿಗಳನ್ನು ಬಂಧಿಸಿ ಶಿವಮೊಗ್ಗಕ್ಕೆ ಕರೆತಂದು ಜೈಲ್‌ಗೆ ಕಳುಹಿಸಿತ್ತು.
ಇತ್ತೀಚೆಗೆ ಬಚ್ಚಾ ನ್ಯಾಯಾಲಯದಿಂದ ಜಾಮೀನು ಪಡೆದು ಕಾರಾಗೃಹದಿಂದ ಹೊರಬಂದಿದ್ದ. ಈ ವಿಷಯ ತಿಳಿದಿದ್ದ ಎದುರಾಳಿ ರೌಡಿ ತಂಡವು ಈತನ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದು, ಬುಧವಾರ ಸಂಜೆ ಆತನನ್ನು ಹಿಂಬಾಲಿಸಿ ಹತ್ಯೆ ನಡೆಸಿದೆ ಎಂದು ಹೇಳಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಲಾರಂಭಿಸಿದ್ದಾರೆ.







