ಮಾಸಾಶನ ನೀಡದೆ ಅಂಚೆಪೇದೆಯಿಂದ ತೊಂದರೆ: ಆರೋಪ

ಮೂಡಿಗೆರೆ, ಫೆ.8: ಕಳೆದ 19 ತಿಂಗಳಿನಿಂದ ನನಗೆ ಅಂಗವಿಕಲ ಮಾಸಾಶನ ಬಂದಿಲ್ಲವೆಂದು ತಾಲೂಕಿನ ಬೀಜುವಳ್ಳಿ ಗ್ರಾಮದ ಅಂಗ ವಿಕಲ ಇಲ್ಯಾಸ್ ಎಂಬವರು ತಹಶೀಲ್ದಾರ್‌ಗೆ ದೂರು ಸಲ್ಲಿಸಿದರು.
ಮಾಸಿಕ ಪಿಂಚಣಿ 1,200 ರೂ. ಈ ಹಿಂದೆ ಅಂಚೆ ಮೂಲಕ ಬರುತ್ತಿತ್ತು. ಅಂಚೆ ಪೇದೆ 1,200 ರೂ.ಗೆ 20 ರೂ. ಕಮಿಷನ್ ಪಡೆಯುತ್ತಿದ್ದರು. ನಂತರ 100 ರೂ. ನೀಡುವಂತೆ ತಿಳಿಸಿದರು.
100 ರೂ. ನೀಡಲು ನಿರಾಕರಿಸಿ 50 ರೂ. ನೀಡುವುದಾಗಿ ತಿಳಿಸಿದೆ. 2015ರ ಜೂನ್ ನಂತರ ನನಗೆ ಮಾಸಿಕ ಪಿಂಚಣಿ ಬಂದಿರುವುದಿಲ್ಲ. ಈ ಬಗ್ಗೆ ಅಂಚೆಪೇದೆಯನ್ನು ವಿಚಾರಿಸಿದರೆ ನಿಮ್ಮ ಪಿಂಚಣಿಯನ್ನು ಸರಕಾರ ನಿಲ್ಲಿಸಿದೆ ಎಂದು ಉತ್ತರ ನೀಡಿರುತ್ತಾರೆ. ಮೂಡಿಗೆರೆ ಅಂಚೆ ಕಚೇರಿಯಲ್ಲಿ ವಿಚಾರಿಸಿದರೆ ಹಳಸೆ ಅಂಚೆ ಕಚೇರಿಗೆ ಕಳುಹಿಸಲಾಗಿದೆ ಎನ್ನುತ್ತಿದ್ದಾರೆ. ಹಳಸೆ ಅಂಚೆ ಕಚೇರಿಗೆ ಹೋದಾಗ 2016 ನವೆಂಬರ್ ತಿಂಗಳ 1,200 ರೂ. ಮಾಸಿಕ ಪಿಂಚಣಿ ನೀಡಿರುತ್ತಾರೆ. 2017ರ ಜನವರಿ ಸೇರಿದಂತೆ 19 ತಿಂಗಳ ಮಾಸಿಕ ವೇತನ ಸಂದಾಯವಾಗಬೇಕು. ಕುರುಡನಾದ ನನಗೆ 19 ತಿಂಗಳ ಮಾಸಿಕ ಪಿಂಚಣಿ ಕೊಡಬೇಕು.
ಮಾಸಿಕ ಪಿಂಚಣಿ ನೀಡದೆ ತೊಂದರೆ ಕೊಟ್ಟ ಹಳಸೆ ಅಂಚೆ ಪೇದೆಯ ಮೇಲೆ ಕ್ರಮ ಕೈಗೊಳ್ಳುವಂತೆ ಇಲ್ಯಾಸ್ ಮತ್ತು ಅವರ ಸಹೋದರಿ ಫಾತಿಮಾ ನೀಡಿರುವ ದೂರಿನಲ್ಲಿ ಆಗ್ರಹಿಸಿದ್ದಾರೆ





