ಪೊಲೀಸ್ ಠಾಣೆಗೆ ಬೆಂಕಿ ಪ್ರಕರಣ
ಬಟ್ಟೂರು ಗ್ರಾಮದಲ್ಲಿ ನೀರವ ವೌನ : ಬಂಧಿತರ ಸಂಖ್ಯೆ 58ಕ್ಕೆ ಏರಿಕೆ

ಪೊಲೀಸ್‌ಗೆ ಹೆದರಿ ಪುರುಷರು ನಾಪತ್ತೆ
ಗದಗ, ಫೆ.8: ಗ್ರಾಮದಲ್ಲಿ ಬಹುತೇಕ ಪುರುಷರು ಊರು ಬಿಟ್ಟು ಓಡಿ ಹೋಗಿದ್ದಾರೆ. ಮಹಿಳೆಯರು, ಮಕ್ಕಳು ಊರಲ್ಲಿದ್ದರೂ ಮನೆ ಬಿಟ್ಟು ಹೊರ ಬರಲು ಹೆದರುತ್ತಿದ್ದಾರೆ. ಊರು ಬಿಟ್ಟು ಹೋದ ಮಕ್ಕಳನ್ನು ನೆನೆದು ಮಹಿಳೆಯರು, ವೃದ್ಧರು ಕಣ್ಣೀರುಡುತ್ತಿದ್ದಾರೆ. ಅಮಾಯಕರನ್ನು ಬಂಧಿಸುತ್ತಿದ್ದಾರೆ ಎಂದು ಮಹಿಳೆಯರು ಪೊಲೀಸರ ವಿರುದ್ಧ ಕಿಡಿಕಾರುತ್ತಿದ್ದಾರೆ.
ಪುರುಷರು ಇಲ್ಲದ ಈ ಊರಲ್ಲಿ ನೀರವಮೌನ.. ಮಕ್ಕಳು ಊರು ಬಿಟ್ಟಿದ್ದಕ್ಕೆ ಹೆತ್ತವರ ಕಣ್ಣೀರು.. ವಿದ್ಯಾರ್ಥಿಗಳು ಇಲ್ಲದೇ ಅಂಗನವಾಡಿ, ಶಾಲೆಗಳು ಖಾಲಿ ಖಾಲಿ.. ಹೌದು ಇದು ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬಟ್ಟೂರು ಗ್ರಾಮದ ಮಹಿಳೆಯರ ಕಣ್ಣೀರಿನ ಕಥೆ. ಫೆ 5ರಂದು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಯುವಕ ಲಾಕಪ್ ಡೆತ್ ಆಗಿದ್ದಾನೆ ಎಂದು ಆರೋಪಿಸಿ ಪ್ರತಿಭಟನೆ ನಡೆದಿತ್ತು. ಈ ವೇಳೆ ಕೆಲ ದುಷ್ಕರ್ಮಿಗಳು ಏಕಾಏಕಿ ಪೊಲೀಸ್ ಠಾಣೆಗೆ ನುಗ್ಗಿ ಬೆಂಕಿ ಹಚ್ಚಿ ಇಡೀ ಪೊಲೀಸ್ ಠಾಣೆ ಧ್ವಂಸ ಮಾಡಿದ್ದರು.
ದುಷ್ಕರ್ಮಿಗಳ ಕೃತ್ಯಕ್ಕೆ ಇಡೀ ಪೊಲೀಸ್ ಠಾಣೆ ಸುಟ್ಟು ಕರಕಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಐದು ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ದುಷ್ಕರ್ಮಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.ಪೊಲೀಸರು ಗ್ರಾಮದಲ್ಲೇ ಠಿಕಾಣಿ ಹೂಡಿದ್ದು, ಈಗಾಗಲೇ ಬಟ್ಟೂರು ಗ್ರಾಮದಲ್ಲಿ ಹಲವರನ್ನು ಬಂಧಿಸಿದ್ದಾರೆ.
ಮೃತ ಶಿವಪ್ಪ ಬಟ್ಟೂರು ಗ್ರಾಮದಾವರಾಗಿರುವ ಕಾರಣಕ್ಕೆ ಎಲ್ಲಿ ನಮ್ಮನ್ನೂ ಬಂಧಿಸುತಾರೋ ಎಂದು ಆತಂಕಿತರಾಗಿ ಇಡೀ ಗ್ರಾಮದಲ್ಲಿ ಮಹಿಳೆ, ಮಕ್ಕಳು, ವೃದ್ಧರನ್ನು ಹೊರತು ಪಡಿಸಿ ಮಿಕ್ಕವರೆಲ್ಲ ಊರು ಬಿಟ್ಟಿದ್ದಾರೆ. ಹೀಗಾಗಿ ಇಡೀ ಗ್ರಾಮದಲ್ಲಿ ಯಾರೊಬ್ಬರೂ ಪುರುಷರಿಲ್ಲದೆ ನೀರವ ಮೌನ ಆವರಿಸಿದ್ದು, ಪುರುಷರು ಇಲ್ಲದ ಊರಲ್ಲಿ ಮಹಿಳೆಯರು ಭಯದಿಂದ ಬದುಕು ಸಾಗಿಸುವಂತಾಗಿದೆ. ಬಟ್ಟೂರು ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪೊಲೀಸರು ಕಾರ್ಯಾಚರಣೆತೀವ್ರಗೊಳಿಸಿದ್ದು, ದುಷ್ಕರ್ಮಿಗಳ ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಗ್ರಾಮದಲ್ಲಿ ಡಿಆರ್ ಪೊಲೀಸ್ ತುಕಡಿ ಠಿಕಾಣಿ ಹೂಡಿದ್ದು, ಗ್ರಾಮಸ್ಥರ ನಿದ್ದೆಗೆಡಿಸಿದೆ. ಸದ್ಯ ಬಟ್ಟೂರು ಗ್ರಾಮದಲ್ಲಿ ಪುರುಷರಿಲ್ಲದ ಬಹುತೇಕ ಮನೆಗಳಿಗೆ ಬೀಗವನ್ನೂ ಜಡಿಯಲಾಗಿದೆ. ಸಿಪಿಐ ಸೋಮಶೇಖರ್ ಜುಟ್ಟಲ್, ಪಿಎಸ್ಸೈಗಳಾದ ಲಾಲಸಾಬ್ ಜೂಲಕಟ್ಟಿ, ಜೆ.ಎ. ಪಾಟೀಲ್ ನೇತೃತ್ವದ ಪೊಲೀಸ್ ತಂಡ ದುಷ್ಕರ್ಮಿಗಳ ಶೋಧ ನಡೆಸುತ್ತಿದೆ.
ಬಟ್ಟೂರು ಗ್ರಾಮದ ಶಿವಪ್ಪ ಎಂಬವ ರನ್ನು ಲಾಕಪ್ ಡೆತ್ ಮಾಡಿದ್ದಾರೆ ಎಂದು ಆರೋಪಿಸಿ ಫೆ.5ರಂದು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲಾಗಿತ್ತು. ಈ ಸಂಬಂಧ ಅಕ್ರಮ ಮರಳು ದಂಧೆಕೋರರ ವಿಚಾರಣೆ ನಡೆಸಲಾಗುತ್ತಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಐದು ತಂಡಗಳನ್ನು ರಚಿಸಲಾಗಿದೆ. ಠಾಣೆಯ ಸಿಸಿಟಿವಿ ವೀಡಿಯೊ ಫುಟೇಜ್ ವೀಕ್ಷಿಸಿ ದುಷ್ಕರ್ಮಿಗಳನ್ನು ಬಂಧಿಸಲಾಗುತ್ತಿದೆೆ. ದುಷ್ಕೃತ್ಯದ ಹಿಂದೆ ಯಾವುದೇ ಪಕ್ಷ ಅಥವಾ ಎಂಥಹಾ ಪ್ರಭಾವಿಗಳಿದ್ದರೂ ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ವಹಿಸಲಾಗುವುದು. ಸಂತೋಷ್‌ಬಾಬು, ಎಸ್ಪಿ







