ಉಡುಗೆ-ತೊಡುಗೆ ವಿಚಾರದಲ್ಲಿ ಸಾಮರಸ್ಯ ಕದಡುವ ಕೃತ್ಯ
ಶಿವಮೊಗ್ಗ: ಸಮವಸ್ತ್ರ ವಿವಾದ

ಶಿವಮೊಗ್ಗ, ಫೆ.8: ಇತ್ತೀಚೆಗೆ ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಸಮವಸ್ತ್ರ ಧರಿಸುವ ಬಗ್ಗೆ ಉಂಟಾದ ವಿವಾದಕ್ಕೆ ಸಂಬಂಧಿಸಿದಂತೆ ಬುಧವಾರ ಸಂಜೆ ನಗರದ ಸರಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಸಾಮರಸ್ಯ ಸಭೆ ನಡೆಯಿತು.
ಸಭೆೆಯಲ್ಲಿ ಭಾಗವಹಿಸಿದ್ದ ಮುಖಂಡರು ಇತ್ತೀಚೆಗೆ ಕಾಲೇಜು ಆವರಣದಲ್ಲಿ ನಡೆದ ವಿದ್ಯಮಾನಗಳನ್ನು ತೀವ್ರವಾಗಿ ಖಂಡಿಸಿದರು. ಶಿಕ್ಷಣ ಕೇಂದ್ರಗಳಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ಸಂಬಂಧಿಸಿದ ಇಲಾಖೆಗಳು ಗಮನಹರಿಸಬೇಕು ಎಂದು ಆಗ್ರಹಿಸಿದರು.
ಆಹಾರ, ಉಡುಗೆ-ತೊಡುಗೆ ವಿಚಾರದಲ್ಲಿ ಶಾಂತಿ-ಸಾಮರಸ್ಯ ಕದಡುವ ಯಾವುದೇ ಕೃತ್ಯವನ್ನು ಖಂಡಿಸುವುದು. ಸಮವಸ್ತ್ರ ಸಾರ್ವಜನಿಕ ಚರ್ಚೆಯ ವಿಷಯವಲ್ಲ. ಕಾಲೇಜು ಹಂತದಲ್ಲಿ ಸಮವಸ್ತ್ರ ಜಾರಿ ವ್ಯಕ್ತಿಗತ ಸ್ವಾತಂತ್ರ ಹರಣವಾಗಿರುತ್ತದೆ. ಈ ದಿಕ್ಕಿನಲ್ಲಿ ಕಾಲೇಜು ಆಡಳಿತ ಮಂಡಳಿಗಳು ಸರಿಯಾದ ತೀರ್ಮಾನ ಕೈಗೊಳ್ಳಬೇಕು. ಶಾಂತಿ ಮತ್ತು ಸಾಮರಸ್ಯ ಕಾಪಾಡುವಲ್ಲಿ ನಾಗರಿಕರು ಪ್ರಜ್ಞಾಪೂರ್ವಕವಾಗಿ ಶ್ರಮಿಸಬೇಕು.
ಸಾಮರಸ್ಯ ಕೆಡಿಸುವ ಯಾವುದೇ ಶಕ್ತಿ - ವ್ಯಕ್ತಿಗಳ ವಿರುದ್ಧ ಪೊಲೀಸ್ ಇಲಾಖೆ ನಿರ್ದಾಕ್ಷಿಣ್ಯ ಕಠಿಣ ಕ್ರಮ ಜರಗಿಸಬೇಕು ಎಂದು ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಸಭೆಯಲ್ಲಿ ಪ್ರಗತಿಪರ ಮುಖಂಡರಾದ ಕೆ.ಎಲ್. ಅಶೋಕ್, ಕೆ.ಪಿ.ಶ್ರೀಪಾಲ್, ಪತ್ರಕರ್ತ ಎನ್. ರವಿಕುಮಾರ್, ಡಿ.ಎಸ್.ಎಸ್. ಮುಖಂಡ ಗುರುಮೂರ್ತಿ, ರೈತ ಸಂಘದ ಮುಖಂಡ ಕೆ.ಟಿ.ಗಂಗಾಧರ್ ಸೇರಿದಂತೆ ವಿವಿಧ ಧರ್ಮಗಳ ಧರ್ಮಗುರುಗಳು ಉಪಸ್ಥಿತರಿದ್ದರು.







