ದಿಡ್ಡಳ್ಳಿ ಹೋರಾಟವನ್ನು ಹತ್ತಿಕ್ಕಲು ದಾಳಿ ಯತ್ನ: ಅಪ್ಪಾಜಿ ಆರೋಪ

ಮಡಿಕೇರಿ, ಫೆ.8:ದಿಡ್ಡಳ್ಳಿ ಹೋರಾಟವನ್ನು ಸಹಿಸದ ಕೆಲವರು ತನ್ನ ಮೇಲೆ ದಾಳಿ ಯತ್ನ ಮಾಡುವ ಮೂಲಕ ಆತಂಕವನ್ನು ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿರುವ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಪ್ರಮುಖ ಜೆ.ಕೆ.ಅಪ್ಪಾಜಿ ಮುಂದಿನ ದಿನಗಳಲ್ಲಿ ತಮಗೆ ಅಪಾಯ ಸಂಭವಿಸಿದಲ್ಲಿ ಅದಕ್ಕೆ ಹೋರಾಟದ ವಿರುದ್ಧ ಹೇಳಿಕೆ ನೀಡುತ್ತಿರುವವರು ಹಾಗೂ ಅರಣ್ಯ ಅಧಿಕಾರಿಗಳೇ ನೇರ ಹೊಣೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.13ರಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಅಧ್ಯಕ್ಷ ದೊರೆಸ್ವಾಮಿ ಅವರ ಆಗಮನದ ನಂತರ ದಿಡ್ಡಳ್ಳಿಯಲ್ಲೇ ನಿವೇಶನ ಕಲ್ಪಿಸಬೇಕೆಂದು ಒತ್ತಾಯಿಸಿ ಹೋರಾ ಟವನ್ನು ತೀವ್ರಗೊಳಿಸುವುದಾಗಿ ತಿಳಿಸಿದರು.
ಜಿಲ್ಲೆಯ ಪ್ರಭಾವಿ ಜನಾಂಗವೊಂದು ಗಿರಿಜನರ ಹೋರಾಟದ ವಿರುದ್ಧ ಹೇಳಿಕೆಗಳನ್ನು ನೀಡುತ್ತಾ ಗೊಂದಲ ಸೃಷ್ಟಿಸುತ್ತಿದೆ. ಪ್ರಭಾವಿ ಜನಾಂಗದ ಮನೆಗಳಲ್ಲೇ ಕೊಡಗಿನ ಮೂಲ ನಿವಾಸಿಗಳಾದ ಆದಿವಾಸಿಗಳು ಅನಾದಿ ಕಾಲ ದಿಂದಲೂ ಕಾರ್ಮಿಕರಾಗಿ ದುಡಿಯುತ್ತಾ ಬರುತ್ತಿದ್ದಾರೆ. ಮೂಲನಿವಾಸಿ ಗಿರಿಜನರಿಗೆ ಜಿಲ್ಲೆಯಲ್ಲೇ ನಿವೇಶನ ಕಲ್ಪಿಸಲು ಅಡ್ಡಿ ಪಡಿಸುತ್ತಿರುವುದೇಕೆ ಎಂದು ಪ್ರಶ್ನಿಸಿದ ಜೆ.ಕೆ.ಅಪ್ಪಾಜಿ, ದಿಡ್ಡಳ್ಳಿ ಪ್ರದೇಶ ಪೈಸಾರಿ ಎಂದು ದಾಖಲೆಗಳಿರುವುದಕ್ಕಾಗಿ ಇದೇ ಪ್ರದೇಶದಲ್ಲಿ ನಿವೇಶನ ಹಂಚಬೇಕೆಂದು ಒತ್ತಾಯಿಸಿ ಹೋರಾಟ ನಡೆಸುತ್ತಿರುವುದಾಗಿ ಸ್ಪಷ್ಟಪಡಿಸಿದರು.
ಕೊಡಗು ಜಿಲ್ಲೆಯಲ್ಲಿ ಟಿಬೆಟ್ ನಿರಾಶ್ರಿತರಿಗೆ ಅರಣ್ಯ ಭಾಗದಲ್ಲಿ ಹಾಗೂ ತಮಿಳು ಕಾರ್ಮಿಕರಿಗೆ ಪೈಸಾರಿ ಜಾಗದಲ್ಲಿ ನಿವೇಶನಗಳನ್ನು ನೀಡಲಾಗಿದೆ.
ಆದರೆ ಮೂಲನಿವಾಸಿಗಳಾದ ಆದಿವಾಸಿಗಳಿಗೆ ನಿವೇಶನ ನೀಡಲು ಹಿಂದೇಟು ಹಾಕುತ್ತಿರುವುದು ಯಾಕೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ದಾಳಿ ಯತ್ನದ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮುಂದೆ ಅನಾಹುತಗಳು ಸಂಭವಿಸಿದಲ್ಲಿ ತಮ್ಮ ವಿರುದ್ಧ ಹೇಳಿಕೆಗಳನ್ನು ನೀಡುತ್ತಿರುವವರು ಹಾಗೂ ಅರಣ್ಯ ಇಲಾಖೆ ನೇರ ಹೊಣೆ ಎಂದು ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿಗಳು ದಿಡ್ಡಳ್ಳಿ ನಿರಾಶ್ರಿತರಿಗೆ ಇದೇ ಪ್ರದೇಶದಲ್ಲಿ ನಿವೇಶನ ನೀಡುವ ಭರವಸೆ ನೀಡಿದ್ದರಲ್ಲದೆ, ವಿಶೇಷ ಸಭೆ ನಡೆಸುವ ಕುರಿತು ಪ್ರಸ್ತಾಪಿಸಿದ್ದರು. ಆದರೆ ಇಲ್ಲಿಯವರೆಗೆ ಯಾವುದೇ ಸ್ಪಂದನೆ ದೊರೆಯದ ಕಾರಣ ಫೆ.13ರಿಂದ ಹೋರಾಟವನ್ನು ತೀವ್ರಗೊಳಿಸುತ್ತಿರುವುದಾಗಿ ಅಪ್ಪಾಜಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖ ವೈ.ಕೆ.ಮಲ್ಲ ಉಪಸ್ಥಿತರಿದ್ದರು.







