ರೈಲು ಹಳಿ ತಪ್ಪುವ ಪ್ರಕರಣಗಳ ಹೆಚ್ಚಳ: ಕೇಂದ್ರ ಕಳವಳ
ಹೊಸದಿಲ್ಲಿ,ಫೆ.8: ಇತ್ತೀಚಿನ ದಿನಗಳಲ್ಲಿ ರೈಲು ಹಳಿಗಳಿಗೆ ಹಾನಿಯೆಸಗುವ ಹಾಗೂ ಸ್ಫೋಟಗಳನ್ನು ನಡೆಸುವ ಯತ್ನಗಳು ಹೆಚ್ಚುತ್ತಿರುವ ಬಗ್ಗೆ ಕೇಂದ್ರ ಸರಕಾರ ಇಂದು ಸಂಸತ್‌ನಲ್ಲಿ ಗಂಭೀರ ಕಳವಳ ವ್ಯಕ್ತಪಡಿಸಿತು.
ಲೋಕಸಭೆಯಲ್ಲಿ ಸರಣಿ ಪೂರಕ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ರೈಲ್ವೆ ಸಚಿವ ಸುರೇಶ್ ಪ್ರಭು ಅವರು, ಇತ್ತೀಚಿನ ದಿನಗಳಲ್ಲಿ ರೈಲು ಹಳಿಗಳನ್ನು ಸ್ಫೋಟಿಸುವ ಏಳು ಪ್ರಯತ್ನಗಳು ಹಾಗೂ ಮೂರು ವಿಧ್ವಂಸಕ ಕೃತ್ಯದ ಪ್ರಕರಣಗಳು ವರದಿಯಾಗಿರುವುದಾಗಿ ತಿಳಿಸಿದರು.
ಉತ್ತರಪ್ರದೇಶದ ಕಾನ್ಪುರದಲ್ಲಿ ರೈಲು ಹಳಿತಪ್ಪಿದ ಘಟನೆಗೆ ಸಂಬಂಧಿಸಿದ ಪ್ರಕರಣದ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಈಗಾಗಲೇ ತನಿಖೆ ಆರಂಭಿಸಿರುವುದಾಗಿ ತಿಳಿಸಿದರು.
ಪಶ್ನೋತ್ತರ ವೇಳೆಯಲ್ಲಿ ಮಾತನಾಡುತ್ತಿದ್ದ ಅವರು, ಕಳೆದ ಕೆಲವು ದಿನಗಳಲ್ಲಿ ರೈಲುಹಳಿಗಳಲ್ಲಿ ಅಸಹಜ ಚಟುವಟಿಕೆಗಳು ನಡೆದಿರುವುದು ವರದಿಯಾಗಿದ್ದು, ರೈಲ್ವೆ ಸಿಬ್ಬಂದಿಯ ಕಟ್ಟೆಚ್ಚರದಿಂದಾಗಿ ದುರಂತಗಳು ಸಂಭವಿಸುವುದು ತಪ್ಪಿದೆಯೆಂದರು.
ಇತ್ತೀಚಿನ ರೈಲು ಹಳಿತಪ್ಪಿದ ಘಟನೆಗಳ ಬೆನ್ನಲ್ಲೇ ಪ್ರಧಾನಿಯವರ ರಾಜತಾಂತ್ರಿಕ ನೈಪುಣ್ಯತೆಯಿಂದಾಗಿ, ಜಪಾನ್, ದ.ಕೊರಿಯ ಹಾಗೂ ಇಟಲಿ ದೇಶಗಳು ತಜ್ಞರ ತಂಡವನ್ನು ಭಾರತಕ್ಕೆ ಕಳುಹಿಸಿದೆಯೆಂದು ಪ್ರಭು ಸದನಕ್ಕೆ ತಿಳಿಸಿದರು.
ಹಳಿಗಳಲ್ಲಿ ಉಂಟಾಗುವ ಬಿರುಕುಗಳನ್ನು ಪತ್ತೆಹಚ್ಚಲು ರೈಲ್ವೆ ಇಲಾಖೆಯು ‘ಅಲ್ಟ್ರಾಸೋನಿಕ್ ಟ್ರಾಕ್ ಡಿಟೆಕ್ಷನ್ ಸಿಸ್ಟಮ್’ನಂತಹ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲಿದ್ದು, ಇದರಿಂದಾಗಿ ರೈಲ್ವೆ ದುರಂತಗಳು ಸಂಭವಿಸದಂತೆ ತಡೆಯಬಹುದಾಗಿದೆಯೆಂದರು.
2006-07ರವರೆಗೆ 195 ರೈಲ್ವೆ ಅವಘಡಗಳು ಸಂಭವಿಸಿದ್ದರೆ, 2014-15ರಲ್ಲಿ ಅವು 135ಕ್ಕೆ ಇಳಿಕೆಯಾಗಿವೆ. 2015-16ರಲ್ಲಿ ಅವಘಡಗಳ ಸಂಖ್ಯೆ 107ಕ್ಕೆ ಕುಸಿದಿದೆಯೆಂದು ಪ್ರಭು ಲಿಖಿತ ಉತ್ತರದಲ್ಲಿ ತಿಳಿಸಿದರು.
2014-15 ಹಾಗೂ 2016-17ರಲ್ಲಿ ಗಂಭೀರ ಪರಿಸ್ಥಿತಿಯ ರೈಲ್ವೆ ಅವಘಡಗಳ ಸಂಖ್ಯೆ 95ರಲ್ಲಿಯೇ ಸ್ಥಿರಗೊಂಡಿದೆಯೆಂದು ಸುರೇಶ್ ಪ್ರಭು ಹೇಳಿದರು





