ಮುಂಜಾನೆ 3 ಗಂಟೆಗೆ ರಾಷ್ಟ್ರೀಯ ಸುರಕ್ಷತಾ ಸಲಹೆಗಾರನಿಗೆ ಕರೆ ಮಾಡಿ ಡಾಲರ್ ಸ್ಥಿತಿ ಕೇಳಿದ ಟ್ರಂಪ್ !
ಶ್ವೇತ ಭವನದ ಸಿಬ್ಬಂದಿಗೆ ತಲೆನೋವು ತಂದಿಟ್ಟ 5 ಸಮಸ್ಯೆಗಳು

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ‘ಚಂಚಲ’ ನಡವಳಿಕೆಯು ಅವರ ಕಾರ್ಯಕಾರಿ ಏಜನ್ಸಿಗಳಿಂದ...ಅಷ್ಟೇ ಏಕೆ,ಶ್ವೇತಭವನದಿಂದಲೂ ಮಾಹಿತಿಗಳ ಸೋರಿಕೆಗೆ ಪೂರಕ ವಾತಾವರಣವನ್ನು ಸೃಷ್ಟಿಸಿದೆ.
ಶ್ವೇತಭವನದಿಂದ ಸೋರಿಕೆ ಹೊಸದಲ್ಲವಾದರೂ ಮಾಹಿತಿಗಳನ್ನು ಸೋರಿಕೆ ಮಾಡುವ ಮೂಲಗಳು ಅಧ್ಯಕ್ಷರು ಈ ಶಕ್ತಿಶಾಲಿ ಹುದ್ದೆಗೆ ಸೂಕ್ತ ವ್ಯಕ್ತಿಯಲ್ಲದಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿವೆ. ಸಾಮಾನ್ಯವಾಗಿ ಸೋರಿಕೆಗಳು ಪರಸ್ಪರರ ಯೋಜನೆಗಳಿಗೆ ಬತ್ತಿ ಇಡಲು ಯತ್ನಿಸುವ ಅಧಿಕಾರಿಗಳ ಬುಡಮೇಲು ಕೃತ್ಯಗಳು ಅಥವಾ ಸಮಸ್ಯಾತ್ಮಕ ಎಂದು ತಾವು ಭಾವಿಸುವ ನೀತಿ ನಿರ್ಧಾರಗಳನ್ನು ವಿಫಲಗೊಳಿಸುವ ಅಧಿಕಾರಿಗಳ ಯತ್ನಗಳಿಗೆ ಸಂಬಂಧಿಸಿದ್ದರೆ ಟ್ರಂಪ್‌ರ ನೂತನ ಆಡಳಿತವು ಮೂರನೇ ವರ್ಗವೊಂದನ್ನು ಹುಟ್ಟುಹಾಕಿದೆ. ಶ್ವೇತಭವನದೊಳಗಿನಿಂದ ಸೋರಿಕೆಗಳು ಮತ್ತು ಟ್ರಂಪ್ ನಡವಳಿಕೆಯಿಂದ ಎಚ್ಚರಿಕೆಯಿಂದಿರುವ ಅಧಿಕಾರಿಗಳು ಈ ಮೂರನೇ ವರ್ಗ ಎಂದು ಹಫಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಸಿಬ್ಬಂದಿಗೆ ಕಿರಿಕಿರಿ ಸೃಷ್ಟಿಸಿರುವ ಐದು ವಿಷಯಗಳು
►ಟ್ರಂಪ್ ನಸುಕಿನ ಮೂರು ಗಂಟೆಗೆ ತನ್ನ ರಾಷ್ಟ್ರೀಯ ಭದ್ರತಾ ಸಲಹೆಗಾರ ಲೆಜಮೈಕ್ ಫ್ಲಿನ್‌ಗೆ ಕರೆ ಮಾಡಿ ಅಂತರರಾಷ್ಟ್ರೀಯ ಕರೆನ್ಸಿ ಮಾರುಕಟ್ಟೆಯಲ್ಲಿ ಡಾಲರ್‌ನ ವೌಲ್ಯವೆಷ್ಟಿದೆ ಎಂದು ಪ್ರಶ್ನಿಸಿದ್ದಾರೆ. ಗೂಢಚಯೆ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಅವರಿಗೆ ಅರ್ಥಶಾಸ್ತ್ರದ ಓನಾಮವೂ ಗೊತ್ತಿಲ್ಲ. ಹೀಗಾಗಿ ಅರ್ಥಶಾಸ್ತ್ರಜ್ಞರನ್ನು ಕೇಳುವಂತೆ ಟ್ರಂಪ್‌ಗೆ ಸೂಚಿಸಿ ಫೋನ್ ಇಟ್ಟಿದ್ದಾರೆ.
►ಸುದೀರ್ಘ ಟಿಪ್ಪಣಿಗಳನ್ನು ಓದುವುದೆಂದರೆ ಟ್ರಂಪ್‌ಗೆ ಅಲರ್ಜಿ. ಹೀಗಾಗಿ ಅವರಿಗೆ ಸಲ್ಲಿಸಬೇಕಾದ ಮಾಹಿತಿಗಳನ್ನು ಒಂದೇ ಪುಟದಲ್ಲಿ ಅಡಕಗೊಳಿಸುವುದು ಸಿಬ್ಬಂದಿಗೆ ಭಾರೀ ತಲೆನೋವನ್ನುಂಟು ಮಾಡಿದೆ.
► ಇದು ನಿಜಕ್ಕೂ ಟ್ರಂಪ್! ಅಧ್ಯಕ್ಷರ ವಿಶೇಷ ವಿಮಾನ ಏರ್‌ಫೋರ್ಸ್ ಒನ್‌ನಲ್ಲಿರುವ ಟವೆಲ್‌ಗಳ ಬಗ್ಗೆ ಅವರಿಗೆ ಸದಾ ದೂರುಗಳಿವೆ. ಸಣ್ಣ ಸಣ್ಣ ವಿಷಯಗಳ ಬಗ್ಗೆಯೂ ಅವರು ಅತಿಯಾದ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಇಲ್ಲವೇ ತೀವ್ರವಾಗಿ ಕೆರಳುತ್ತಾರೆ. ಈ ಟವೆಲ್‌ಗಳು ಅವರ ಕೆರಳುವಿಕೆಗೆ ಕಾರಣವಾಗಿವೆ. ಅವು ಮೃದುವಾಗಿಲ್ಲ ಎನ್ನುವುದು ಅವರ ದೂರು.
►ನಿರಾಶ್ರಿತರು ಮತ್ತು ಮುಸ್ಲಿಮ್ ಬಾಹುಳ್ಯದ ಏಳು ರಾಷ್ಟ್ರಗಳ ಪ್ರಜೆಗಳಿಗೆ ಅಮೆರಿಕ ಪ್ರವೇಶವನ್ನು ನಿಷೇಧಿಸಿದ ಟ್ರಂಪ್ ನೀತಿಗೆ ವಿರೋಧವಿದೆ ಎನ್ನುವುದನ್ನು ಕೆಲವು ಸೋರಿಕೆಗಳು ಬೆಟ್ಟುಮಾಡಿವೆ. ಅವರ ಮಾತುಗಳು ಮತ್ತು ಟ್ವಿಟರ್ ಪೋಸ್ಟ್‌ಗಳು ನಿಜವಾದ ಬೆದರಿಕೆಯನ್ನು ಒಡ್ಡುತ್ತಿವೆ.
►ಇದೇ ರೀತಿ ಟ್ರಂಪ್ ಮತ್ತು ಮೆಕ್ಸಿಕೊದ ಅಧ್ಯಕ್ಷ ಎನ್ರಿಕ್ ಪೆನಾ ನೀಟೊ ಅವರ ನಡುವಿನ ದೂರವಾಣಿ ಸಂಭಾಷಣೆಯ ವಿವರಗಳನ್ನು ಸುದ್ದಿಸಂಸ್ಥೆ ಎಪಿ ಪ್ರಕಟಿಸಿತ್ತು ಮೆಕ್ಸಿಕೊದಲ್ಲಿ ‘ಕೆಟ್ಟ ವ್ಯಕ್ತಿಗಳು ’ ಇದ್ದಾರೆ ಎಂದು ಹೇಳಿದ್ದ ಟ್ರಂಪ್,ಅವರನ್ನು ನೋಡಿಕೊಳ್ಳಲು ತಾನು ಅಮೆರಿಕದ ಸೇನೆಯನ್ನು ಕಳುಹಿಸಬೇಕಾದೀತು ಎಂದು ಗುಡುಗಿದ್ದರು. ಇದರಿಂದ ಸಂಭಾವ್ಯ ಹಾನಿಯನ್ನು ತಪ್ಪಿಸಲು ಶ್ವೇತಭವನವು ನಂತರ ಅವರು ಸುಮ್ಮನೆ ತಮಾಷೆ ಮಾಡಿದ್ದರು ಎಂದು ಸಮಜಾಯಿಷಿ ನೀಡಿತ್ತು.







