ಕೋಲಾಗಳಿಗೇಕೆ ಶ್ರೀರಕ್ಷೆ!?
ಮಾನ್ಯರೆ,
ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಪಾನಿಪುರಿಗೆ ಟಾಯ್ಲೆಟ್ ಕ್ಲೀನರ್ ಬೆರೆಸಿ ಮಾರಾಟ ಮಾಡುತ್ತಿದ್ದ ಚೇತನ್ ನಾಂಜಿ ಮಾರ್ವಾಡಿ ಎಂಬ ವ್ಯಾಪಾರಿಗೆ 6 ತಿಂಗಳ ಶಿಕ್ಷೆಯಾಗಿದೆ. ಈತ ಕೊಡುತ್ತಿದ್ದ ಪಾನಿಪುರಿಗೆ ಮನಸೋತವರಿಗೆ ಈಗ ಅದೆಷ್ಟು ಕಸಿವಿಸಿಯಾಗಿದೆಯೋ ತಿಳಿಯದು. ಆದರೆ ಟಾಯ್ಲೆಟ್ ಕ್ಲೀನರನ್ನೂ ಆಹಾರ ಪದಾರ್ಥವಾಗಿ ಬಳಸಬಹುದೆಂದು ಸಂಶೋಧನೆ ಮಾಡಿದ ಈತನಿಗೆ ಜೈಲು ಶಿಕ್ಷೆಯಾಗಿದೆ.
ವಿಶ್ವದ ನಾನಾದೇಶಗಳು ಕೋಲಾಗಳನ್ನು ಟಾಯ್ಲೆಟ್ ಕ್ಲೀನರ್‌ಗಳಿಗೆ ಸಮವೆಂದು ಹೇಳಿವೆ. ಇನ್ನು ಇಂಟರ್‌ನೆಟ್‌ನಲ್ಲಿ ಇಣುಕಿದರೆ ಕೋಲಾವನ್ನು ಟಾಯ್ಲೆಟ್ ಕ್ಲೀನರ್ ಆಗಿ ಬಳಸಬಹುದೆಂಬ ಹಲವಾರು ಮಾಹಿತಿಗಳು, ಯೂಟ್ಯೂಬ್‌ಗಳು ಗೋಚರಿಸುತ್ತವೆ. ಕೋಲಾ ಕರಾಮತ್ತು ಇಷ್ಟಕ್ಕೇ ಸೀಮಿತವಲ್ಲ. ಅದು ಕೀಟನಾಶಕವೆಂಬುದನ್ನು ಆಂಧ್ರದ ರೈತರು ದಶಕಗಳ ಹಿಂದೆಯೇ ಸಾಬೀತು ಮಾಡಿದ್ದರು!
ಕೋಲಾ ಬಳಸಿದಷ್ಟೂ ಅಪಾಯ ಹೆಚ್ಚು! ಮೂಳೆ ಸವೆತ, ಕಿಡ್ನಿ ವೈಫಲ್ಯ, ಉದರಬೇನೆ, ಲಿವರ್ ಡ್ಯಾಮೇಜ್ ಹತ್ತು ಹಲವು ಸಮಸ್ಯೆಗಳನ್ನು ಕೋಲಾ ಸೇವನೆಯಿಂದ ತರಿಸಿಕೊಳ್ಳಬಹುದು. ಆರೋಗ್ಯ ತಪಾಸಣಾಧಿಕಾರಿಗಳು ಇಂತಹ ಪಾನೀಯ ಮಾರಾಟದ ವಿರುದ್ಧ ಆಗಾಗ ಚಾಟಿ ಬೀಸುತ್ತಿದ್ದರೂ ಪ್ರಬಲ ಲಾಬಿಯಿಂದಾಗಿ ಇದರ ಮಾರಾಟ ಮಿತಿ ಮೀರಿ ಬೆಳೆಯುತ್ತಿದೆ. ಅದೆಷ್ಟೋ ವೇಳೆ ದಾಳಿ ನಡೆದ ವರದಿಗಳೂ ಪ್ರಕಟಗೊಳ್ಳದಂತೆ ಕೋಕ್ ಕಂಪೆನಿಗಳು ನೋಡಿಕೊಳ್ಳುತ್ತವೆೆ. ಜನ ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಅಜ್ಞಾನದ ಪರಮಾವಧಿ ಅದೆಷ್ಟು ಇರುತ್ತದೆ ಎಂದರೆ ಈ ಕಾಯಿಲೆಗಳು ಕೋಲಾದಿಂದಲೇ ಬಂದಿವೆ ಎಂಬ ಸಂಗತಿ ಅವರ ಮೆದುಳಿಗೆ ತಾಕುವುದಿಲ್ಲ.!
ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾಗಳಂತಹ ದೇಶಗಳಲ್ಲಿ ಮಾತ್ರವಲ್ಲದೆ ಕತ್ತಲೆಯ ಖಂಡ ಆಫ್ರಿಕಾದಲ್ಲೂ ಕೋಲಾ ವಿರುದ್ಧ ಪ್ರತಿಭಟನೆಗಳು, ಎಚ್ಚರಿಕೆಯ ಸಂದೇಶಗಳು, ಜಾಗೃತಿ ಓಟಗಳು ನಡೆದಿವೆ. ಆದರೆ ನಮ್ಮಲ್ಲಿ ಅಂತಹ ಪ್ರಯೋಗಗಳು ಗೋಚರಿಸಿಲ್ಲ. ಒಟ್ಟಿನಲ್ಲಿ ಟಾಯ್ಲೆಟ್ ಕ್ಲೀನರ್ ಬೆರೆಸಿ ಪಾನಿಪುರಿ ಮಾರಿದ ಚೇತನ್ ನಾಂಜಿ ಮಾರ್ವಾಡಿಯಂತಹವರಿಗೆ ಶಿಕ್ಷೆಯಾಗುತ್ತದೆ. ಆದರೆ ಕೋಲಾಗಳು ಟಾಯ್ಲೆಟ್ ಕ್ಲೀನರ್‌ಗಳೇ ಆದರೂ ರಕ್ಷೆ!







