ಇಂದು ರಾಜ್ಯಪಾಲರ ಜತೆ ಶಶಿಕಲಾ ಭೇಟಿ
ಪ್ರಮುಖ ಬೆಳವಣಿಗೆಗಳು

ಚೆನ್ನೈ, ಫೆ.9: ರಾಜಕೀಯ ಕಂಪನಕ್ಕೆ ಕಾರಣವಾದ ತಮಿಳುನಾಡಿನಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ಸಂಭವಿಸುತ್ತಿದ್ದು, ಶಶಿಕಲಾ ತಮ್ಮ ಬಲಪ್ರದರ್ಶನಕ್ಕೆ ಸಜ್ಜಾಗಿದ್ದಾರೆ. ಗುರುವಾರ ಮಧ್ಯಾಹ್ನ 2 ಗಂಟೆಗೆ ಅವರು ರಾಜ್ಯಪಾಲರನ್ನು ಭೇಟಿ ಮಾಡುವ ಕಾರ್ಯಕ್ರಮ ನಿಗದಿಯಾಗಿದ್ದು, ಪಕ್ಷದ 134 ಶಾಸಕರ ಪೈಕಿ 131 ಮಂದಿ ಶಶಿಕಲಾ ಜತೆಗಿದ್ದಾರೆ. ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶಶಿಕಲಾ, ಪನ್ನೀರ್ ಸೆಲ್ವಂ ವಿರುದ್ಧ ವಾಗ್ದಾಳಿ ಮಾಡಿದ್ದು, ಪಕ್ಷಕ್ಕೆ ದ್ರೋಹ ಬಗೆದ ಸುಳ್ಳುಗಾರ ಎಂದು ದೂರಿದ್ದಾರೆ.
ಪನ್ನೀರ್ ಸೆಲ್ವಂ ಅಥವಾ ಇತರ ಪಕ್ಷಗಳ ಮುಖಂಡರು ಕುದುರೆ ವ್ಯಾಪಾರ ನಡೆಸುವುದನ್ನು ತಡೆಯಲು ಎಲ್ಲ ಶಾಸಕರನ್ನು ರೆಸಾರ್ಟ್‌ನಲ್ಲಿ ಉಳಿಸಿಕೊಳ್ಳಲಾಗಿದೆ. ತಮ್ಮ ಉಚ್ಚಾಟನೆಯನ್ನು ಅಕ್ರಮ ಎಂದು ಪನ್ನೀರ್ ಸೆಲ್ವಂ ಬಣ್ಣಿಸಿದ್ದು, ತಮ್ಮ ಅನುಮತಿ ಇಲ್ಲದೇ ಯಾವ ಬ್ಯಾಂಕ್ ವಹಿವಾಟನ್ನೂ ನಡೆಸುವಂತಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ತಮ್ಮನ್ನು ಅವಮಾನಿಸಿ, ರಾಜೀನಾಮೆ ನೀಡುವಂಥ ಪರಿಸ್ಥಿತಿ ನಿರ್ಮಿಸಲಾಗಿದ್ದು, ಸದನದಲ್ಲಿ ವಿಶ್ವಾಸಮತ ಗಳಿಸುವ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಜಯಲಲಿತಾ ನಿಧನದ ಬಳಿಕ ಪನ್ನೀರ್‌ಸೆಲ್ವಂ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರೂ, ಶಶಿಕಲಾಗೆ ಪಟ್ಟಕಟ್ಟುವ ತೆರೆಮರೆಯ ಕಸರತ್ತು ನಡೆದೇ ಇತ್ತು. ಇದರ ಮೊದಲ ಹಂತವಾಗಿ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆ ಪಡೆದಿದ್ದರು.
ರಾಜಕೀಯ ತಳಮಳ ಇದ್ದರೂ ರಾಜ್ಯಪಾಲ ರಾವ್ ಅವರು ಚೆನ್ನೈಗೆ ಆಗಮಿಸಿರಲಿಲ್ಲ. ಈ ಕ್ರಮದ ವಿರುದ್ಧ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸುವುದಾಗಿ ಎಐಎಡಿಎಂಕೆ ಸಂಸದರು ಬೆದರಿಕೆ ಹಾಕಿದ್ದರು.







