ಉಪಹಾರ್ ಅಗ್ನಿ ದುರಂತ: ಗೋಪಾಲ್ ಅನ್ಸಾಲ್ ಗೆ ಒಂದು ವರ್ಷ ಜೈಲು ಶಿಕ್ಷೆ

ಹೊಸದಿಲ್ಲಿ, ಫೆ.9: ಹತ್ತೊಂಬತ್ತು ವರ್ಷಗಳ ಹಿಂದೆ ಸಂಭವಿಸಿದ ಉಪಹಾರ್ ಚಿತ್ರ ಮಂದಿರ ಬೆಂಕಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಪ್ರಕರಣದ ಪ್ರಮುಖ ಆರೋಪಿ ರಿಯಲ್ ಎಸ್ಟೇಟ್ ಉದ್ಯಮಿ ಗೋಪಾಲ್ ಅನ್ಸಲ್ ಗೆ ಒಂದು ವರ್ಷ ಜೈಲು ಸಜೆ ವಿಧಿಸಿ ಆದೇಶ ನೀಡಿದೆ.
ಗ್ರೀನ್ ಪಾರ್ಕ್ ಸಮೀಪದ ಉಪಹಾರ್ ಚಿತ್ರಮಂದಿರದಲ್ಲಿ 1997 ಜೂನ್ 13ರಂದು "ಬಾರ್ಡರ್" ಚಿತ್ರ ಪ್ರದರ್ಶನದ ವೇಳೆಯಲ್ಲಿ ಸಂಭವಿಸಿದ ಅಗ್ನಿ ದುರಂತದಿಂದಾಗಿ ಸುಮಾರು 59 ಮಂದಿ ಮೃತಪಟ್ಟಿದ್ದರು. ಸುಮಾರು 150ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಗೋಪಾಲ್ ಅನ್ಸಾಲ್ ಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ್ದು, ನಾಲ್ಕು ವಾರಗಳ ಒಳಗಾಗಿ ಗೋಪಾಲ್ ಅನ್ಸಾಲ್ ಶರಣಾಗಿ ಶಿಕ್ಷೆ ಅನುಭವಿಸಬೇಕು ಎಂದು ಆದೇಶ ನೀಡಿದೆ. ಆದರೆ ಗೋಪಾಲ್ ಸಹೋದರ ಸುಶೀಲಸ್ ಅನ್ಸಾಲ್ ಅವರ ಶಿಕ್ಷೆಯಲ್ಲಿ ನ್ಯಾಯಾಲಯ ಕಡಿತಗೊಳಿಸಿದೆ. ಈ ಹಿಂದೆ ನ್ಯಾಯಾಲಯ ಇಬ್ಬರಿಗೂ ವಿಧಿಸಿದ್ದ ತಲಾ 30 ಕೋಟಿ ರೂ.ದಂಡದ ಮೊತ್ತದಲ್ಲಿ ಯಾವುದೇ ರೀತಿಯ ಕಡಿತ ಮಾಡಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.





