ಗೋವಾ ಹೆದ್ದಾರಿ ಅಪಘಾತದಲ್ಲಿ ಬಲಿಯಾದ ಮುಂಬೈನ ಏಳು ಸ್ನೇಹಿತರು

ಮುಂಬೈ,ಫೆ.9: ಬುಧವಾರ ಬೆಳಿಗ್ಗೆ ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ರತ್ನಾಗಿರಿ ಬಳಿ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿಹೊಡೆದ ಪರಿಣಾಮ ಮುಂಬೈ ವಿಲೆಪಾರ್ಲೆಯ ನಿವಾಸಿಗಳಾದ ಏಳು ಸ್ನೇಹಿತರು ಮೃತಪಟ್ಟಿದ್ದು, ಇಂದು ಚಕಾಲಾ ಚಿತಾಗಾರದಲ್ಲಿ ಅವರ ಅಂತ್ಯಸಂಸ್ಕಾರ ನಡೆಯಿತು.
ಸಚಿನ್ ಸಾವಂತ್, ಪ್ರಶಾಂತ ಗುರವ, ಅಕ್ಷಯ ಕೇರಕರ್, ನಿಹಾಲ್ ಕೋಟಿಯಾನ್, ಕೇದಾರ ತೊಂಡ್ಕರ್, ವೈಭವ ಮಾನ್ವೆ ಮತ್ತು ಮಯೂರ ಬೆಳ್ನೆಕರ್ ಮೃತ ದುರ್ದೈವಿಗಳು. ಅಭಿಷೇಕ ಕಾಂಬಳಿ ಎಂಬಾತ ಗಾಯಗೊಂಡಿದ್ದಾನೆ.
ಈ ಎಂಟೂ ಸ್ನೇಹಿತರು ಮುಂಬೈನಿಂದ ಗೋವಾಕ್ಕೆ ಪ್ರಯಾಣಿಸುತ್ತಿದ್ದಾಗ ಈ ದುರಂತ ಸಂಭವಿಸಿತ್ತು.
ಮೃತರ ಪೈಕಿ ಇಬ್ಬರ ತಾಯಂದಿರಿಗೆ ಇಂದು ಬೆಳಿಗ್ಗೆ ಮೃತದೇಹಗಳು ಮನೆಗೆ ತಲುಪಿದಾಗಷ್ಟೇ ವಿಷಯವನ್ನು ತಿಳಿಸಲಾಗಿತ್ತು. ಅಂತ್ಯಸಂಸ್ಕಾರ ನಡೆಯುತ್ತಿದ್ದಾಗ ಮೃತ ಯುವಕನೋರ್ವನ ತಾಯಿ ಕುಸಿದು ಬಿದ್ದಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಘಾತದಿಂದ ಇನ್ನೋರ್ವ ಮೃತನ ತಂದೆಯೂ ಕುಸಿದು ಬಿದ್ದಿದ್ದರು.
ತಮ್ಮ ಪ್ರದೇಶದ ‘ಏಳು ಅತ್ಯಂತ ಸ್ನೇಹಜೀವಿಗಳ ’ಅಂತ್ಯಸಂಸ್ಕಾರದ ವ್ಯವಸ್ಥೆಯನ್ನು ಸ್ಥಳೀಯರೇ ಮಾಡಿದ್ದರು.







