ಯಶಸ್ಸಿಗೆ ಪರಿಶ್ರಮ ಅಗತ್ಯ: ನ್ಯಾ. ಕೆ.ಎಸ್. ಬೀಳಗಿ
‘ಸ್ಪಂದನಾ: ವಾಸ್ತವಕ್ಕೆ ಪ್ರತಿಕ್ರಿಯೆ’ ವಿಚಾರ ಸಂಕಿರಣ

ಮಂಗಳೂರು, ಫೆ.9: ಸಾಧಿಸುವ ಛಲ ಮತ್ತು ಪರಿಶ್ರಮವಿದ್ದರೆ ಯಶಸ್ಸು ಸಿಗಲಿದೆ. ಹಾಗಾಗಿ ಬದುಕಿನಲ್ಲಿ ಸಂತಸ ಕಾಣಲು ಪರಿಶ್ರಮ ಪಡುವ ಅಗತ್ಯವಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕೆ.ಎಸ್. ಬೀಳಗಿ ಹೇಳಿದರು.
ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಮತ್ತು ಅಶೋಕ ಇನ್ನೊವೇಟರ್ಸ್ ಫಾರ್ ದ ಪಬ್ಲಿಕ್ ವತಿಯಿಂದ ‘ಸ್ಪಂದನಾ: ವಾಸ್ತವಕ್ಕೆ ಪ್ರತಿಕ್ರಿಯೆ’ ಎಂಬ ವಿಷಯದ ಕುರಿತು ಗುರುವಾರ ರೋಶನಿ ನಿಲಯ ಸಭಾಂಗಣದಲ್ಲಿ ನಡೆದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವ್ಯಕ್ತಿತ್ವದ ಬಗ್ಗೆ ಇತರರ ಪ್ರಾಮಾಣಿಕ ಮಾತು ನಮ್ಮ ಬೆಳವಣಿಗೆಗೆ ಪೂರಕವಾಗಬಹುದು. ಹಾಗಾಗಿ ಉತ್ತಮ ಮನುಷ್ಯರಾಗಬೇಕಾದರೆ ಅತ್ಯುತ್ತಮ ವಿದ್ಯಾರ್ಥಿಯಾಗಬೇಕಾಗಿದೆ. ಆ ಮೂಲಕ ಸಮಾಜದಲ್ಲಿ ಬದಲಾವಣೆ ತರುವ ಕೆಲಸ ಮಾಡಬಹುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸ್ಕೂಲ್ ಆಫ್ ಸೋಷಿಯಲ್ ವರ್ಕ್‌ನ ಉಪ ಪ್ರಾಂಶುಪಾಲ ಡಾ. ಜೆನಿಸ್ ಪಿ. ಮೇರಿ ಮಾತನಾಡಿ, ರೋಶನಿ ನಿಲಯದಲ್ಲಿ ಪತ್ರಿಕೋದ್ಯಮ ಸಹಿತ ಹೊಸ ವಿಚಾರಗಳ ಬಗ್ಗೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಹೊಸ ಕೋರ್ಸ್‌ಗಳನ್ನು ಆರಂಭಿಸುವ ಚಿಂತನೆ ಇದೆ ಎಂದರು. ಜೆಸ್ಸಿ ಶರೋನ್, ವಿನಿತಾ ಫೆರ್ನಾಂಡಿಸ್ ಮೊದಲಾದವರು ಉಪಸ್ಥಿತರಿದ್ದರು.





