ಉಚ್ಚಿಲ ಹೆದ್ದಾರಿ ವಿಭಜಕ ಸಮಸ್ಯೆ: ಸಾರ್ವಜನಿಕರಿಂದ ಹೆದ್ದಾರಿ ಇಲಾಖೆಗೆ 15 ದಿನದ ಗಡುವು

ಪಡುಬಿದ್ರಿ, ಫೆ.9: ಉಚ್ಚಿಲ ಪೇಟೆಯಲ್ಲಿ ಕ್ರಾಸಿಂಗ್ ನೀಡಬೇಕು ಹಾಗೂ ಸರ್ವಿಸ್ ರಸ್ತೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿ ಗುರುವಾರ ಬೃಹತ್ ಸಾರ್ವಜನಿಕ ಪ್ರತಿಭಟನೆ ನಡೆಸಿದ್ದು, ಹೆದ್ದಾರಿ ಇಲಾಖೆಗೆ ಬೇಡಿಕೆ ಪೂರೈಸಲು ಪ್ರತಿಭಟನಕಾರರು 15 ದಿನದ ಗಡುವು ನೀಡಿ, ಬೇಡಿಕೆ ಈಡೇರಿಸದಿದ್ದರೆ ಡಿವೈಡರ್ ಒಡೆದು ತಾವೇ ವ್ಯವಸ್ಥೆ ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬಡಾ ಗ್ರಾ.ಪಂ ವ್ಯಾಪ್ತಿಯ ಉಚ್ಚಿಲ ಮುಖ್ಯ ಪೇಟೆ ಪ್ರದೇಶದ ರಾ.ಹೆ 66ರಲ್ಲಿ ಸೂಕ್ತ ಕ್ರಾಸಿಂಗ್ ಮತ್ತು ಸರ್ವಿಸ್ ರಸ್ತೆಯ ಬೇಡಿಕೆಯನ್ನು ಮುಂದಿರಿಸಿ ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘದ ನೇತೃತ್ವದಲ್ಲಿ ಉಚ್ಚಿಲದ ವಿವಿಧ ಸಂಘ ಸಂಸ್ಥೆಗಳು ಮತ್ತು ಗ್ರಾ.ಪಂ ಸದಸ್ಯರು, ಅನೇಕ ಜನಪ್ರತಿನಿಧಿಗಳ ಮುಂದಾಳತ್ವದೊಂದಿಗೆ ಪ್ರತಿಭಟನೆ ನಡೆಯಿತು.
ಉಚ್ಚಿಲ ಪ್ರದೇಶದಿಂದ ಹಾದು ಹೋಗುವ ರಾ.ಹೆ 66 ನೆರೆಗ್ರಾಮಗಳಾದ ಮುದರಂಗಡಿ, ಪಣಿಯೂರು, ಎಲ್ಲೂರು, ಶಿರ್ವ, ಬೆಳಪು ಗ್ರಾಮಗಳಿಗೆ ಸಂಪರ್ಕ ರಸ್ತೆಯಾಗಿದ್ದು, ಈ ಪ್ರದೇಶದಲ್ಲಿ ಸಮರ್ಪಕ ಕ್ರಾಸಿಂಗ್ ವ್ಯವಸ್ಥೆಯಿಲ್ಲದೆ ಸಾರ್ವಜನಿಕರು ಪರದಾಡುವಂತಾಗುತ್ತಿದ್ದು, ಸಮಸ್ಯೆಯ ಬಗ್ಗೆ 2014ರಿಂದ ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತಿತ್ತು. ಆದರೆ ಎಲ್ಲಾ ಮನವಿಗೂ ಯಾವುದೇ ಪೂರಕ ಉತ್ತರ ದೊರಕಿದಿರುವ ಸಲುವಾಗಿ ಉಚ್ಚಿಲದ ಎಲ್ಲಾ ಸಂಘ ಸಂಸ್ಥೆಗಳು ಸೇರಿ ಉಚ್ಚಿಲದಲ್ಲಿ ಪ್ರತಿಭಟನೆ ನಡೆಸಿದ್ದು ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿಸಿದ್ದಾರೆ.
ಬೆಳಪು ಗ್ರಾ.ಪಂ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, 2010ರಲ್ಲಿ ರಾ.ಹೆ ಕಾಮಗಾರಿ ಪ್ರಾರಂಭವಾಗುತ್ತಿದ್ದ ವೇಳೆ ರಸ್ತೆ ಅಗಲೀಕರಣಗೊಂಡು ವಾಹನ ದಟ್ಟಣೆ ಕಡಿಮೆಯಾಗಿ ಅಪಘಾತಗಳು ಕ್ಷೀಣಿಸುವ ಕಾರಣ ವಾಹನ ಸಂಚಾರ ಸುಗಮವಾಗಬಹುದೆಂದು ಸಾರ್ವಜನಿಕರು ನಿರೀಕ್ಷೆಯಲ್ಲಿದ್ದರು. ಆದರೆ ಇಂದು ಜನರು ಭಯಭೀತ ಜೀವನ ನಡೆಸುವ ಪರಿಸ್ಥಿತಿ ಉದ್ಭವವಾಗಿದೆ. 2010ರ ನೀಲಿನಕಾಶೆಯ ಅನ್ವಯ ಸರ್ವಿಸ್ ರಸ್ತೆ, ವೈಜ್ಞಾನಿಕ ತಿರುವುಗಳನ್ನು ಕೊಡಬೇಕು. ಆದರೆ ಸಾರ್ವಜನಿಕ ಹಿತಾಸಕ್ತಿ ಕಾಪಾಡಿಕೊಳ್ಳದೆ, ಸ್ಥಳೀಯ ಬೇಡಿಕೆಗಳನ್ನು ಈಡೇರಿಸದೆ ಏಕಾಏಕಿ ಟೋಲ್ ಸಂಗ್ರಹಕ್ಕೂ ಮುಂದಾಗಿದ್ದಾರೆ. ಇದೇ ರೀತಿ ಮುಂದಾದಲ್ಲಿ ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮದಲ್ಲೂ ಜನಜಾಗೃತಿ ಮಾಡಬೇಕಾಗಬಹುದು. ಕಂಪನಿಯು ತನ್ನ ಜೇಬು ತುಂಬಿಸುವ ಕೆಲಸ ಕೈಬಿಡದಿದ್ದರೆ ಸಾಂಕೇತಿಕ ಹೋರಾಟವನ್ನು ಉಗ್ರ ಸ್ವರೂಪಕ್ಕೆ ಪರಿವರ್ತಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಉಚ್ಚಿಲ ಪೇಟೆ ಪ್ರದೇಶಕ್ಕೆ ಹೊಂದಿಕೊಂಡು ಎರಡು ಶಾಲೆಗಳಿದ್ದು ಸುಮಾರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ದಿನನಿತ್ಯ ರಸ್ತೆ ದಾಟುವ ಅನಿವಾರ್ಯತೆಯಲ್ಲಿದ್ದಾರೆ. ಶಾಲಾ ಮಕ್ಕಳಿಗೆ ರಸ್ತೆ ದಾಟುವ ವೇಳೆ ತೀವ್ರ ತೊಂದರೆಗಳಾಗುತ್ತಿದ್ದು ಅಪಘಾತ ಸಂಭವಿಸಿದ ನಿದರ್ಶನಗಳೂ ಇವೆ. ಹೆದ್ದಾರಿ ಇಲಾಖಾಧಿಕಾರಿಗಳು ಸಮಸ್ಯೆಗೆ ಸಂಬಂಧಿಸಿ ಇಲ್ಲಸಲ್ಲದ ಕಾನೂನು ಹೇಳುತ್ತಾರೆ. ಈ ಬಗ್ಗೆ ಸಾರ್ವಜನಿಕರು ಒತ್ತಡ ಹೇರದಿದ್ದರೆ, ದಾರಿತಪ್ಪಿಸುವ ಅಧಿಕಾರಿಗಳಿಗೆ ಬುದ್ಧಿ ಕಲಿಸದಿದ್ದರೆ ಸಮಸ್ಯೆ ಪರಿಹಾರ ಆಗುವುದಿಲ್ಲ ಎಂದು ಮಹಾಲಕ್ಷ್ಮೀ ಶಾಲೆಯ ಮುಖ್ಯಸ್ಥ ಶರತ್ ಗುಡ್ಡೆಕೊಪ್ಲ ಹೇಳಿದರು.
ಪ್ರತಿಭಟನೆಯ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಧಿಕ್ಕಾರ ಕೂಗಲಾಯಿತು.
ಜಿ.ಪಂ ಸದಸ್ಯೆ ಶಿಲ್ಪ ಸುವರ್ಣ, ತಾ.ಪಂ ಸದಸ್ಯ ಶೇಖಬ್ಬ, ಗ್ರಾಪಂ ಅಧ್ಯಕ್ಷೆ ನಾಗರತ್ನ ಕರ್ಕೇರ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಜೆ. ಶೆಟ್ಟಿ, ಕಾಪು ಬಿಜೆಪಿ ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಬಿ.ಎಸ್ ಆಚಾರ್ಯ, ದೀಪಕ್ ಎರ್ಮಾಳು, ಗಣೇಶ್ ಆಚಾರ್ಯ ಉಚ್ಚಿಲ, ಪುಟ್ಟಮ್ಮ ಶ್ರೀಯಾನ್, ವಸಂತಿ ಮಧ್ವರಾಜ್, ಯಶ್‌ವಂತ್ ಶೆಟ್ಟಿ, ಚಂದ್ರಶೇಖರ್ ಕೋಟ್ಯಾನ್, ವಿಶ್ವಾಸ್ ವಿ. ಅಮೀನ್, ಗುಲಾಂ ಮೊಹಮ್ಮದ್, ರಹೀಂ ಕುಂಜೂರು, ಯಶವಂತ ಶೆಟ್ಟಿ ಎಲ್ಲೂರು, ಧೀರಜ್ ಹುಸೈನ್, ಇಬ್ರಾಹಿಮ್ ಅರ್ಶ್, ವೇಣುಗೋಪಾಲ, ಮುಂತಾದವರು ಮಾತನಾಡಿದರು. ಗ್ರ.ಪಂ ಸದಸ್ಯರ ಸಹಿತ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಜನಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದರು. ರಿಕ್ಷಾ ಚಾಲಕ ಮತ್ತು ಮಾಲಕರ ಸಂಘದ ಅಧ್ಯಕ್ಷ ಸಿರಾಜ್ ವಂದಿಸಿದರು. ಪ್ರತಿಭಟನೆಯ ಹಿನ್ನಲೆಯಲ್ಲಿ ಉಚ್ಚಿಲದ ಸರ್ವ ರಿಕ್ಷಾ ಚಾಲಕರು ಬೆಳಗ್ಗೆಯಿಂದಲೇ ಬಂದ್ ಆಚರಿಸಿದರು.







