ನಿಮ್ಮ ಕೈ ನಮ್ಮ ಸೋದರ, ಸೋದರಿಯರ ರಕ್ತದಿಂದ ಒದ್ದೆಯಾಗಿದೆ : ಒಬಾಮಾರನ್ನು ದೂಷಿಸಿದ 9/11ರ ದಾಳಿಯ ರೂವಾರಿ

ಮಿಯಾಮಿ, ಫೆ.9: ತಾನು 9/11 ದಾಳಿಯ ರೂವಾರಿ ಎಂದು ಹೇಳಿಕೊಂಡಿರುವ ವ್ಯಕ್ತಿಯೋರ್ವ ತಾನು ಸೆರೆಯಲ್ಲಿರುವ ಗ್ವಾಂಟನಾಮೊ ಜೈಲಿನಿಂದ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಪತ್ರವೊಂದನ್ನು ಬರೆದಿದ್ದು ಅದರಲ್ಲಿ ಮಾಜಿ ಅಧ್ಯಕ್ಷರ ಹಸ್ತವು ಇನ್ನೂ ನಮ್ಮ ಸೋದರ ಸೋದರಿಯರ ರಕ್ತದಿಂದ ಒದ್ದೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.
ಇಸ್ರೇಲಿ ಪಡೆಗಳಿಂದ ಗಾಝಾದಲ್ಲಿ ಹತ್ಯೆಗೀಡಾದ ಫೆಲೆಸ್ತಿನ್ ನಾಗರಿಕರು ಮತ್ತು ಯೆಮೆನ್ ಹಾಗೂ ಇನ್ನಿತರ ಕಡೆಗಳಲ್ಲಿ ಅಮೆರಿಕ ನಡೆಸಿದ ಡ್ರೋಣ್ ದಾಳಿಯಲ್ಲಿ ಮೃತಪಟ್ಟವರನ್ನು ಉಲ್ಲೇಖಿಸಿ ಈ ರೀತಿ ಬರೆಯಲಾಗಿದೆ .
ವಿಮಾನ ಅಪಹರಣ ಪ್ರಕರಣದಲ್ಲಿ ದೋಷಿಗಳೆಂದು ಆರೋಪದಲ್ಲಿ ಸೈನಿಕ ಆಯೋಗದಿಂದ ವಿಚಾರಣೆ ಎದುರಿಸುತ್ತಿರುವ ಐವರು ಆರೋಪಿಗಳಲ್ಲಿ ಓರ್ವನಾಗಿರುವ ಖಾಲಿದ್ ಶೇಕ್ ಮುಹಮ್ಮದ್ ಈ ಪತ್ರ ಬರೆದಿದ್ದು ನ್ಯಾಯಾಲಯವು ತನಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ನೀಡಿದರೂ ತೊಂದರೆಯಿಲ್ಲ ಎಂದಿದ್ದಾನೆ.
9/11ರ ಭಯೋತ್ಪಾತಕ ದಾಳಿಯು ಅಮೆರಿಕದ ವಿದೇಶ ನೀತಿಯ ಕುರಿತು ವ್ಯಕ್ತಪಡಿಸಲಾದ ಒಂದು ಸ್ವಾಭಾವಿಕ ಪ್ರತಿಕ್ರಿಯೆಯಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ವಾಷಿಂಗ್ಟನ್ ಮತ್ತು ನ್ಯೂಯಾರ್ಕ್‌ನಲ್ಲಿ ನಡೆಸಲಾದ ಎರಡು ಪವಿತ್ರ ದಾಳಿಗಳು ಪ್ರಾಕೃತಿಕ ನಿಯಮಾನುಸಾರವಾಗಿ ನಡೆದಿವೆ. ಇದು ಇಸ್ಲಾಮಿಕ್ ಜಗತ್ತಿನ ಕುರಿತು ನೀವು ಅನುಸರಿಸುತ್ತಿರುವ ವಿನಾಶಕಾರಿ ನೀತಿಗಳ ವಿರುದ್ಧದ ಒಂದು ಸಹಜ ಪ್ರತಿಕ್ರಿಯೆಯಾಗಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ.
ಈ ಪತ್ರವನ್ನು ಮುಹಮ್ಮದ್ 2015ರಲ್ಲಿ ಕಳಿಸಲು ಯೋಚಿಸಿದ್ದ. ಆದರೆ ಇದೊಂದು ಪ್ರಚಾರಪತ್ರದ ರೀತಿಯಲ್ಲಿ ಇದೆ ಎಂದು ಜೈಲಿನ ಅಧಿಕಾರಿಗಳು ಹಾಗೂ ಸೈನಿಕ ನ್ಯಾಯಾಲಯದ ನ್ಯಾಯಾಧೀಶರು ಹೇಳಿದ ಕಾರಣದಿಂದ ಈ ಪತ್ರವನ್ನು ತಡೆಹಿಡಿಯಲಾಗಿತ್ತು. ಈ ಕುರಿತ ವಾದ ವಿವಾದದ ಬಳಿಕ, ಕಳೆದ ತಿಂಗಳು ಒಬಾಮಾ ಅಧ್ಯಕ್ಷ ಪದವಿಯಿಂದ ನಿರ್ಗಮಿಸುತ್ತಿದ್ದಂತೆಯೇ ನ್ಯಾಯ ಮಂಡಳಿಯು ತ್ರವನ್ನು ಕಳಿಸಲು ಸೂಚಿಸಿದ್ದರು.
ಈ ಪತ್ರದ ವಿವರವನ್ನು ಮೊದಲು ಪ್ರಕಟಿಸಿದ್ದು ‘ದಿ ಮಿಯಾಮಿ ಹೆರಾಲ್ಡ್’ ಪತ್ರಿಕೆ. ಖೈದಿಗಳ ವಕೀಲರು ಈ ಪತ್ರದ ಪ್ರತಿಯನ್ನು ‘ದಿ ಅಸೋಸಿಯೇಟೆಡ್ ಪ್ರೆಸ್’ಗೆ ನೀಡಿದ್ದರು. ಒಬಾಮಾ ಅವರ ಅಧ್ಯಕ್ಷಾವಧಿಯ ಮುಗಿಯುವ ಅಂತಿಮ ದಿನಾಂಕದ ಮುಂಚಿನ ದಿನ ಇದು ಒಬಾಮಾ ಕಚೇರಿಗೆ ತಲುಪಿದ್ದು ಒಬಾಮಾ ಇದನ್ನು ಓದಿದ್ದಾರೆಯೇ ಎಂಬುದು ಗೊತಾ್ತಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಶ್ವದ ಇತರೆಡೆಯ ಜನರಿಗೆ, ಅದರಲ್ಲೂ ವಿಶೇಷವಾಗಿ ಮುಸ್ಲಿಮರಿಗೆ ಆಗುವ ಕಷ್ಟನಷ್ಟದ ಬಗ್ಗೆ ಅಮೆರಿಕನ್ನರಿಗೆ ಯಾವುದೇ ಬೇಗುದಿಯಿಲ್ಲ ಎಂಬ ಭಾವನೆ ಮುಹಮ್ಮದ್‌ನಲ್ಲಿ ಆಳವಾಗಿ ಬೇರೂರಿದ ಪರಿಣಾಮ ಈ ಪತ್ರ ಎಂದು ಮುಹಮ್ಮದ್‌ರ ಪ್ರತಿನಿಧಿ ವಕೀಲರಾಗಿರುವ ಸೇನಾ ವಿಭಾಗದ ಮೇಜರ್ ಡೆರೆಕ್ ಪೊಟಿಟ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.







