ಎಡಿಎಂಕೆ ಶಾಸಕರು ಅಕ್ರಮ ಬಂಧನದಲ್ಲಿಲ್ಲ: ಹೈಕೋರ್ಟ್‌ಗೆ ತ.ನಾ.ಸರಕಾರದ ಮಾಹಿತಿ

ಚೆನ್ನೈ,ಫೆ.9: ಶಾಸಕರು ತಮ್ಮ ಹಾಸ್ಟೆಲ್‌ನಲ್ಲಿದ್ದಾರೆ ಮತ್ತು ಮುಕ್ತವಾಗಿ ತಿರುಗಾಡುತ್ತಿದ್ದಾರೆ ಎಂದು ತಮಿಳುನಾಡು ಸರಕಾರವು ಗುರುವಾರ ತಿಳಿಸಿದ ಹಿನ್ನೆಲೆಯಲ್ಲಿ 130ಕ್ಕೂ ಅಧಿಕ ಆಡಳಿತ ಎಡಿಎಂಕೆ ಶಾಸಕರನ್ನು ಅಕ್ರಮ ಬಂಧನದಲ್ಲಿರಿಸಲಾಗಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಟ್ರಾಫಿಕ್ ರಾಮಸ್ವಾಮಿ ಮತ್ತು ಪಿಎಂಕೆ ಪದಾಧಿಕಾರಿ ಕೆ.ಬಾಲು ಅವರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಗಳ ತುರ್ತು ವಿಚಾರಣೆ ನಡೆಸಲು ಮದ್ರಾಸ್ ಉಚ್ಚ ನ್ಯಾಯಾಲಯವು ನಿರಾಕರಿಸಿತು.
ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಿದ ಬಳಿಕ ಎಡಿಎಂಕೆ ಶಾಸಕರು ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ ಎಂದು ಸರಕಾರದ ಪರ ವಕೀಲರು ಸ್ಪಷ್ಟವಾಗಿ ತಿಳಿಸಿರುವಾಗ ತುರ್ತು ವಿಚಾರಣೆಯ ಅಗತ್ಯವೇನು ಎಂದು ಪ್ರಶ್ನಿಸಿದ ಪೀಠವು, ಸಹಜ ಕಲಾಪಗಳ ವೇಳೆ ಈ ವಿಷಯವು ತನ್ನೆದುರು ಬಂದರೆ ವಿಚಾರಣೆ ನಡೆಸುವುದಾಗಿ ತಿಳಿಸಿತು. ಶಾಸಕರು ಅಕ್ರಮ ಬಂಧನದಲ್ಲಿದ್ದಾರೆಂದು ಅರ್ಜಿದಾರರು ಈಗಲೂ ಭಾವಿಸುತ್ತಿದ್ದರೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಬಹುದು ಎಂದೂ ಅದು ಹೇಳಿತು.
Next Story





