ಮಂಗಳೂರು ವಿವಿ ಪರೀಕ್ಷಾ ಗೊಂದಲ: ಫೆ.11ರಿಂದ ಎಬಿವಿಪಿಯಿಂದ ಹೋರಾಟ

ಮಂಗಳೂರು, ಫೆ. 9:ಮಂಗಳೂರು ವಿಶ್ವವಿದ್ಯಾನಿಲಯದ 2015-16 ಮತ್ತು 2016-17ನೆ ಸಾಲಿನ ಪರೀಕ್ಷೆಗಳ ಲಿತಾಂಶದಲ್ಲಿ ಗೊಂದಲ ಸೃಷ್ಟಿಯಾಗಿದ್ದು, ಅಸಮರ್ಪಕ ಲಿತಾಂಶ ಪ್ರಕಟನೆಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆರೋಪಿಸಿದೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಹಿತೇಶ ಬೇಕಲ್, ವಿದ್ಯಾರ್ಥಿಗಳ ಭವಿಷ್ಯದಲ್ಲಿ ವಿಶ್ವವಿದ್ಯಾನಿಲಯ ಚೆಲ್ಲಾಟ ಆಡುತ್ತಿದೆ. ವಿಶ್ವವಿದ್ಯಾನಿಲಯದ ಪರೀಕ್ಷಾ ವ್ಯವಸ್ಥೆಯ ಮೇಲೆ ಸಂಶಯ ಮೂಡುವಂತಾಗಿದೆ ಎಂದರು.
ವಿಶ್ವವಿದ್ಯಾನಿಲಯ ವಿದ್ಯಾರ್ಥಿಯೊಬ್ಬನ ಫಲಿತಾಂಶ ಪ್ರಕಟಿಸಲು ಹೊರಗುತ್ತಿಗೆ ಸಂಸ್ಥೆಗೆ ರೂ.120 ಖರ್ಚು ಮಾಡುತ್ತಿದೆ. ಹಿಂದೆ ರೂ.60 ವೆಚ್ಚ ಮಾಡಿ ಗೊಂದಲ ರಹಿತ ಫಲಿತಾಂಶ ಪ್ರಕಟಿಸಲು ಸಾಧ್ಯವಾಗುತ್ತಿತ್ತು. ಕೆಲವು ವಿದ್ಯಾರ್ಥಿಗಳ ಅಂಕ ಪಟ್ಟಿ ಇನ್ನೂ ಸಿಕ್ಕಿಲ್ಲ. ಮತ್ತೆ ಕೆಲವರ ಫಲಿತಾಂಶವೇ ಪ್ರಕಟವಾಗಿಲ್ಲ. ಇವು ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಚಿಂತೆಗೀಡು ಮಾಡಿದೆ ಎಂದು ಹಿತೇಶ್ ದೂರಿದರು.
ಪರೀಕ್ಷಾ ಗೊಂದಲವನ್ನು ಎಬಿವಿಪಿ ಕುಲಪತಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಆದ್ದರಿಂದ ಎರಡು ವರ್ಷಗಳ ಪರೀಕ್ಷಾ ಪ್ರಕ್ರಿಯೆಯನ್ನು ರಾಜ್ಯಪಾಲರು ತನಿಖೆಗೆ ಆದೇಶಿಸ ಬೇಕು ಎಂದು ಅವರು ಆಗ್ರಹಿಸಿದರು.
ವಿಶ್ವವಿದ್ಯಾನಿಲಯ ಪರೀಕ್ಷಾಂಗ ಕುಲಸಚಿವರ ರಾಜೀನಾಮೆಗೆ ಒತ್ತಾಯಿಸಿ ದ.ಕ, ಉಡುಪಿ ಮತ್ತು ಕೊಡಗು ಜಿಲ್ಲೆಗಳ ಪದವಿ ವಿದ್ಯಾರ್ಥಿಗಳು ಫೆ.11ರಿಂದ ನಿರಂತರ ಹೋರಾಟ ನಡೆಸಲಿದ್ದು, ಅಗತ್ಯ ಕಂಡಲ್ಲಿ ವಿಶ್ವವಿದ್ಯಾನಿಲಯಕ್ಕೂ ಮುತ್ತಿಗೆ ಹಾಕುವುದಾಗಿ ಹಿತೇಶ್ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಎಬಿವಿಪಿ ಪದಾಧಿಕಾರಿಗಳಾದ ಮೋಹಿತ್ ಎಸ್., ಚೇತನ್ ಪಡೀಲ್, ಪ್ರಮೋದ್, ಅನುಷ್ಕಾ ಕೊಟ್ಟಾರಿ, ಶೀತಲ್‌ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.







