ಮಂಗಳೂರು: ಫೆ.11-12ರಂದು ಸ್ವಾಮಿ ವಿವೇಕಾನಂದ - ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ

ಮಂಗಳೂರು, ಫೆ. 9: ಯುವ ಬ್ರಿಗೇಡ್ ನೇತೃತ್ವದಲ್ಲಿ ಫೆ .11 ಮತ್ತು 12ರಂದು ನಗರದ ನೆಹರೂ ಮೈದಾನದಲ್ಲಿ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಯುವಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ತಿಳಿಸಿದ್ದಾರೆ.
ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.11ರಂದು ಪೂರ್ವಾಹ್ನ 9 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಬಳಿಯಿಂದ ವಿವೇಕ-ನಿವೇದಿತಾರ ಸಾಹಿತ್ಯದ ಪಲ್ಲಕ್ಕಿ ಉತ್ಸವದ ಮೆರವಣಿಗೆ ನಡೆಯಲಿದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಪಲ್ಲಕ್ಕಿ ಉತ್ಸವ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ 12ರಿಂದ 2 ಗಂಟೆಯವರೆಗೆ ವಿವೇಕ-ನಿವೇದನಾ ಗೋಷ್ಠಿ, 3ರಿಂದ 4ರವರೆಗೆ ಪ್ರೇರಣೆಯ ಮಾತುಗಳಿಗೆ ಪ್ರತಿನಿಧಿಗಳ ದನಿ ಗೋಷ್ಠಿ, 4:30ರಿಂದ 5:30ರವರೆಗೆ ರಾಷ್ಟ್ರಭಕ್ತಿ ಕಾರ್ಯಕ್ರಮ, 6:30ರಿಂದ ವಿವೇಕಾನಂದರ ಕುರಿತ ನರೇಂದ್ರ ಭಾರತ ಕಾರ್ಯಕ್ರಮ ನಡೆಯಲಿದೆ ಎಂದವರು ವಿವರಿಸಿದರು.
ಫೆ.12ರಂದು ಪೂರ್ವಾಹ್ನ 9:30ರಿಂದ ಗೋಷ್ಠಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಅಲ್ಲದೆ ಸೀ ಸಮಾವೇಶ ‘ಶಕ್ತಿ ಸ್ವರೂಪಿಣಿ’, ಮಕ್ಕಳ ಸಮಾವೇಶ ‘ಗೆಲುವೇ ಗುರಿ’, ಮೊಗವೀರರ ಸಮಾವೇಶ ‘ಅವಕಾಶಗಳ ಸಾಗರ’ ಕಾರ್ಯಕ್ರಮಗಳು ನಡೆಯಲಿದೆ ಎಂದು ಸೂಲಿಬೆಲೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಯುವಬ್ರಿಗೇಡ್ ರಾಜ್ಯ ಸಂಚಾಲಕ ನಿತ್ಯಾನಂದ ವಿವೇಕವಂಶಿ, ಮಂಗಳೂರು ವಿಭಾಗ ಸಂಚಾಲಕ ಮಂಜಯ್ಯ ನೇರಂಕಿ, ನಿವೇದಿತಾ ಪ್ರತಿಷ್ಠಾನದ ಸ್ವಾತಿ, ಸಾಹಿತ್ಯ ಸಮ್ಮೇಳನ ಸಮಿತಿ ಸಂಚಾಲಕ ಗಿರಿಧರ ಶೆಟ್ಟಿ ಉಪಸ್ಥಿತರಿದ್ದರು.
ಕೋಮು ಧ್ರುವೀಕರಣಕ್ಕೆ ವಿವೇಕಾನಂದರ ಹೆಸರು
ಕೋಮು ಧ್ರುವೀಕರಣಕ್ಕೆ ಸ್ವಾಮಿ ವಿವೇಕಾನಂದರ ಹೆಸರನ್ನು ಬಳಕೆ ಮಾಡಲಾಗಿದೆ. ವಿವೇಕಾನಂದರ ಹೆಸರನ್ನು ಮುಂದಿಟ್ಟುಕೊಂಡು ಕಾರ್ಯಕ್ರಮವನ್ನು ಹೈಜಾಕ್ ಮಾಡಲಾಗುತ್ತಿದೆ. ಸ್ವಾಮಿ ವಿವೇಕಾನಂದರು ಪ್ರಗತಿಪರ ವಿಚಾರಧಾರೆಗಳನ್ನು ಹೊಂದಿದವರು. ಅವರ ಹಿಂದುತ್ವದ ವಿಚಾರಧಾರೆಗೂ ಸಂಘಪರಿವಾರ ಸಂಘಟನೆಯ ಭಾಗವಾಗಿರುವ ಯುವ ಬ್ರಿಗೇಡ್‌ನ ಹಿಂದುತ್ವ ವಿಚಾರಧಾರೆಗೂ ವ್ಯತ್ಯಾಸಗಳಿವೆ. ಅವರದು ಜಾತಿ, ಧರ್ಮ ಮೀರಿದ ವಿಚಾರಧಾರೆಗಳಿದ್ದರೆ, ಇವರ ವಿಚಾರಧಾರೆ ಅದರ ವಿರುದ್ಧವಾಗಿದೆ. ಆದ್ದರಿಂದ ರಾಮಕೃಷ್ಣ ಮಿಶನ್ ಸಂಘಟನೆಯನ್ನು ಮುಂದಿಟ್ಟುಕೊಂಡು ಯುವಬ್ರಿಗೇಡ್ ಆಯೋಜಿಸಿರುವ ಸ್ವಾಮಿ ವಿವೇಕಾನಂದರ ಹೆಸರಿನ ಸಾಹಿತ್ಯ ಸಮ್ಮೇಳನವು ಮೋಸದಿಂದ ಕೂಡಿದ ಕಾರ್ಯಕ್ರಮವಾಗಿದೆ. ಇಂತಹ ಕಾರ್ಯಕ್ರಮಕ್ಕೆ ನಮ್ಮ ಆಕ್ಷೇಪ ಇದೆ.
* ವಸಂತ ಆಚಾರಿ
ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿ
ವಿವೇಕಾನಂದರ ವಿಚಾರಧಾರೆ, ತತ್ವಗಳಿಗೆ ಗೌರವ ನೀಡಲಿ
ಮಂಗಳೂರು, ಫೆ. 9: ಸ್ವಾಮಿ ವಿವೇಕಾನಂದ ಅವರು ಯಾವುದೇ ಜಾತಿ ಮತ್ತು ಧರ್ಮ ಮತ್ತು ಪಕ್ಷಕ್ಕೆ ಸೀಮಿತರಾದವರಲ್ಲ. ದೇಶ ಕಟ್ಟುವಲ್ಲಿ ಮತ್ತು ಯುವಕರನ್ನು ಸಂಘಟಿಸುಲ್ಲಿ ಅವರ ಪಾತ್ರ ಹಿರಿದಾಗಿತ್ತು. ಇಂತಹವರ ಕಾರ್ಯಕ್ರಮವನ್ನು ಯಾರು ಮಾಡಿದರೂ ನಮ್ಮ ಆಕ್ಷೇಪಪ ಇಲ್ಲ. ಆದರೆ, ಅವರ ವಿಚಾರಧಾರೆ, ಮತ್ತು ತತ್ತ್ವಗಳಿಗೆ ಗೌರವ ನೀಡುವಂತಾಗಲಿ
*ಎಸ್.ಪಿ.ಚಂಗಪ್ಪ
ಜೆಡಿಎಸ್ ಮುಖಂಡ ಹಾಗೂ ಬಾರ್ ಅಸೋಸಿಯೇಶನ್‌ನ ಜಿಲ್ಲಾಧ್ಯಕ್ಷ ಮೋದಿ ಬ್ರಾಂಡ್ ಮತ್ತು ಆರೆಸೆಸ್ ಅಜೆಂಡಾದ ಭಾಗ
ಸ್ವಾಮಿ ವಿವೇಕಾನಂದ ಮಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನದಲ್ಲಿ ‘ನರೇಂದ್ರ ಭಾರತ’ ಎಂಬ ಹೆಸರಿನಲ್ಲಿ ಕಾರ್ಯಕ್ರಮ ನಡೆಯುತ್ತಿರುವುದು ಅತ್ಯಂತ ಅಸಹ್ಯಕರ ಮತ್ತು ಖಂಡನೀಯವಾಗಿದೆ. ಯುವ ಬ್ರಿಗೇಡ್ ಎಂಬುದು ಮೋದಿ ಬ್ರಿಗೇಡ್‌ನ ಅವತಾರ. ಇದರ ಹಿಂದೆ ಆರೆಸೆಸ್‌ನ ಹಿಜೆಂಡ್ ಅಜೆಂಡಾ ಅಡಗಿದೆ. ಇದು ಮೋದಿ ಭಕ್ತರನ್ನು ಸೃಷ್ಟಿಸಿ ಮೋದಿ ಬ್ರಾಂಡ್‌ನ್ನು ಹುಟ್ಟುಹಾಕುವ ಪ್ರಯತ್ನವಾಗಿದೆ. ಸ್ವಾಮಿ ವಿವೇಕಾನಂದರು ಹಿಂದೂ ಪುರುಹಿತ ಶಾಹಿಯ ವಿರುದ್ಧವಾಗಿದ್ದರು. ಇದೀಗ ಅವರ ಹೆಸರಿನಲ್ಲಿ ಸಮ್ಮೇಳನ ನಡೆಸಿ ಅವರ ಹೇಳಿಕೆಗಳನ್ನು ದರ್ಬಳಕೆ ಮಾಡುವ ಸಾಧ್ಯತೆಗಳಿವೆ. ಸಮ್ಮೇಳನದಲ್ಲಿ ನರೇಂದ್ರ ಭಾರತ ಹೆಸರಿಟ್ಟಿರುವುದು ದ್ವಂದ್ವ ಅರ್ಥವನ್ನು ನೀಡುವಂತಿದೆ.
* ಸುರೇಶ್ ಭಟ್ ಬಾಕ್ರಬೈಲ್
ಕೋಮುಸೌಹಾರ್ದ ವೇದಿಕೆ ದ.ಕ. ಜಿಲ್ಲಾಧ್ಯಕ್ಷ
21 ಅಡಿ ಎತ್ತರದ ವಿವೇಕಾನಂದರ ಕೊಲ್ಯಾಜ್
ಸಮ್ಮೇಳದಲ್ಲಿ 21 ಅಡಿ ಎತ್ತರ ಮತ್ತು 16 ಅಡಿ ಅಗಲ ವಿಸ್ತೀರ್ಣದ ಸ್ವಾಮಿ ವಿವೇಕಾನಂದರ ಕೊಲ್ಯಾಜ್ ಆಕರ್ಷಣೆ ಪಡೆದುಕೊಳ್ಳಲಿದೆ. ಮುಲ್ಕಿಯ ವಿದ್ಯಾರ್ಥಿಗಳ ತಂಡ ಇದನ್ನು ನಿರ್ಮಿಸಲಿದೆ. ಇದರೊಂದಿಗೆ ವೇದಿಕೆಯ ಮೇಲೆ 108 ಸೂರ್ಯ ನಮಸ್ಕಾರವನ್ನು 10 ನಿಮಿಷದಲ್ಲಿ ಪೂರೈಸುವ ಮೂಲಕ ನಿರಂಜನ್ ಶೆಟ್ಟಿಯವರು ದಾಖಲೆ ನಿರ್ಮಿಸಲಿದ್ದಾರೆ ಎಂದು ಸೂಲಿಬೆಲೆ ಮಾಹಿತಿ ನೀಡಿದರು.







