ಧರ್ಮಕ್ಕೆ ಗೆಲುವಾಗಲಿದೆ: ಪನ್ನೀರ್‌ಸೆಲ್ವಂ

ಚೆನ್ನೈ, ಫೆ.9: ತಮಿಳುನಾಡಿನಲ್ಲಿ ನಡೆಯುತ್ತಿರುವ ಬಿರುಸಿನ ರಾಜಕೀಯ ಚಟುವಟಿಕೆ ಮಧ್ಯೆ ಇಂದು ರಾಜ್ಯಪಾಲರನ್ನು ಭೇಟಿಮಾಡಿದ ಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ , ರಾಜ್ಯದ ರಾಜಕೀಯ ಪರಿಸ್ಥಿತಿ ಕುರಿತು ಚರ್ಚಿಸಿದರು.
ಆದರೆ ಮಾತುಕತೆಯ ವಿವರ ನೀಡಲು ನಿರಾಕರಿಸಿದ ಅವರು, ಧರ್ಮಕ್ಕೆ ಗೆಲುವಾಗಲಿದೆ. ಆಶಾದಾಯಕ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದಷ್ಟೇ ಹೇಳಿದರು.
ಎಐಎಡಿಎಂಕೆ ಸ್ಥಾಯೀ ಸಮಿತಿ ಅಧ್ಯಕ್ಷ ಇ.ಮಧುಸೂದನ್ ಹಾಗೂ 10 ಹಿರಿಯ ಮುಖಂಡರೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿದ ಪನ್ನೀರ್‌ಸೆಲ್ವಂ, ತಾನು ಒತ್ತಡಕ್ಕೆ ಮಣಿದು ರಾಜೀನಾಮೆ ಸಲ್ಲಿಸಿದ್ದು, ಇದೀಗ ಕಾರ್ಯಕರ್ತರ ಮನವಿಯಂತೆ ರಾಜೀನಾಮೆ ವಾಪಾಸು ಪಡೆಯಲು ಬಯಸಿದ್ದೇನೆ ಎಂದು ಮನವಿ ಮಾಡಿಕೊಂಡರು. ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರ ಆಶೀರ್ವಾದ ತಮ್ಮ ಮೇಲಿದೆ ಎಂದು ಆ ಬಳಿಕ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಪನ್ನೀರ್‌ಸೆಲ್ವಂ ಹೇಳಿದರು.
ವಂಚನೆಯ ಕಾರಣ ಧರ್ಮಕ್ಕೆ ಅಡಚಣೆಯಾಗಿತ್ತು. ಅದಾಗ್ಯೂ ಅಂತಿಮವಾಗಿ ಧರ್ಮಕ್ಕೇ ಗೆಲುವು ಖಂಡಿತ ಎಂಬ ಖ್ಯಾತ ತಮಿಳು ಕವಿ ಸುಬ್ರಹ್ಮಣ್ಯ ಭಾರತಿ ಅವರ ಕವನದ ಸಾಲೊಂದನ್ನು ಅವರು ಉದ್ಧರಿಸಿದರು.





