ನಾನು ಈ ಹಿಂದೆ ಬಿಜೆಪಿ ಬೆಂಬಲಿಗ, ಈ ಬಾರಿ ಅದಕ್ಕೆ ಮತ ಹಾಕಲ್ಲ : ಆಗ್ರಾ ಫ್ಯಾಕ್ಟರಿ ಮಾಲೀಕ ದಲಿಪ್ ಸುವಾರೆ

ಆಗ್ರಾ: ದಲಿಪ್ ಸುರ್ವೆ ಸಣ್ಣ ಕೈಗಾರಿಕೋದ್ಯಮಿ. ಮೇಲ್ವರ್ಗದ ಹಿಂದೂ ಸಮುದಾಯಕ್ಕೆ ಸೇರಿದ ಇವರು ಸದಾ ಬಿಜೆಪಿಗೆ ಮತ ಹಾಕುತ್ತಾ ಬಂದವರು. ಆದರೆ ಈ ಬಾರಿ ಮಾತ್ರ ನಿರ್ಧಾರ ಬದಲಿಸಿದ್ದಾರೆ. ಏಕೆ ಗೊತ್ತೇ?
ನೋಟು ರದ್ದತಿ ನನಗೂ ಸೇಎರಿದಂತೆ ಎಲ್ಲ ಸಣ್ಣ ಉದ್ದಿಮೆದಾರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಬಡವರ್ಗದ 6-8 ಮಂದಿ ಕಾರ್ಮಿಕರಿಗೆ ನಾನು ಉದ್ಯೋಗ ನೀಡಿದ್ದೇನೆ, ಆದರೆ ಕಳೆದ ಕೆಲ ತಿಂಗಳುಗಳಿಂದ ಅವರಿಗೆ ಪಾವತಿ ಮಾಡುವುದು ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲ; ತಮ್ಮದೇ ಹಣವನ್ನೂ ಬ್ಯಾಂಕಿನಿಂದ ಪಡೆಯುವುದು ಕಷ್ಟವಾಗುತ್ತಿದೆ. ಆದ್ದರಿಂದ ಇನ್ನೆಂದೂ ಬಿಜೆಪಿಗೆ ಮತ ಹಾಕುವುದಿಲ್ಲ ಎಂದು ಅವರು ಸ್ಪಷ್ಟಪಡಿಸುತ್ತಾರೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ನಿರ್ಧಾರಕ ಅಂಶವೆಂದರೆ ಉದ್ಯಮಿಗಳು. ಬಿಜೆಪಿ ಬಗ್ಗೆ ಸಂತುಷ್ಟರಾಗಿದ್ದರೆ ಅವರು ಬಿಜೆಪಿ ಗೆಲುವಿಗೆ ಶ್ರಮಿಸುತ್ತಿದ್ದರು. ಆದರೆ ನೋಟು ರದ್ದತಿಯಿಂದಾಗಿ ಉದ್ಯಮಿಗಳಿಗೆ ಬಹಳಷ್ಟು ಹಾನಿಯಾಗಿದೆ ಎಂದು ಸುವಾರೆ ಹೇಳುತ್ತಾರೆ.
ಬಿಜೆಪಿ ಅಲ್ಲದಿದ್ದರೆ ಸುರ್ವೆ ಅವರ ಮತ ಯಾರಿಗೆ ಹೋಗುತ್ತದೆ? ಕಾಂಗ್ರೆಸ್ ಅಭ್ಯರ್ಥಿ ನಜೀರ್ ಅಹ್ಮದ್ ಅವರಿಗೆ. ಆತ ಒಳ್ಳೆಯ ಅಭ್ಯರ್ಥಿ. ಸಮಾಜವಾದಿ ಪಕ್ಷ- ಕಾಂಗ್ರೆಸ್ ಮೈತ್ರಿಕೂಟಕ್ಕೆ ನನ್ನ ಮತ ಎಂದು ಅವರು ಸ್ಪಷ್ಟಪಡಿಸುತ್ತಾರೆ. ಅಖಿಲೇಶ್ ಯುವ, ಕ್ರಿಯಾಶೀಲ ಮುಖಂಡ. ಉತ್ತರ ಪ್ರದೇಶಕ್ಕೆ ಅವರ ಸೇವೆ ಬೇಕಾಗಿದೆ. ಅವರ ಆಡಳಿತಾವಧಿಯಲ್ಲಿ ಮೂಲಸೌಕರ್ಯ ಸುಧಾರಿಸಿದೆ ಎಂದು ವಿವರಿಸುತ್ತಾರೆ.
ಬಿಜೆಪಿಗೆ ಮತ ಹಾಕದಿದ್ದರೂ, ಹಿಂದುತ್ವ ಪಕ್ಷದ ಸಿದ್ಧಾಂತದಲ್ಲಿ ಅವರಿಗೆ ನಂಬಿಕೆ ಇದೆ. ರಾಮಮಂದಿರ ನಿರ್ಮಾಣ ಹಾಗೂ ಗೋರಕ್ಷಾ ಅಭಿಯಾನವನ್ನು ಅವರು ಬೆಂಬಲಿಸುತ್ತಾರೆ. ದೇಶದ ಸಂಪ್ರದಾಯ ಹಾಗೂ ನಂಬಿಕೆ ಉಳಿಸಲು ಇದು ಅನಿವಾರ್ಯ ಎನ್ನುವುದು ಅವರ ಪ್ರತಿಪಾದನೆ.







