ಕೂಟುಹೊಳೆಯಲ್ಲಿ ನೀರಿನ ಪ್ರಮಾಣ ಇಳಿಕೆ
ಕುಂಡಾಮೇಸಿ್ತ್ರ ನೀರು ಸರಬರಾಜಿಗೆ ತಾಂತ್ರಿಕ ಅಡಚಣೆ

ಮಡಿಕೇರಿ ಮಡಿಕೇರಿ, ಫೆ.9: ನಗರದ ಶೇ.70ರಷ್ಟು ಭಾಗಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕೂಟುಹೊಳೆಯಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿದ್ದು, ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದೆ. ಟ್ರಾನ್ಸ್‌ಫಾರ್ಮರ್‌ಗೆ ಸಂಪರ್ಕ ಕಲ್ಪಿಸುವ ಕಾಪರ್ ವಯರ್ ಕಳ್ಳತನವಾಗಿ, ತಾಂತ್ರಿಕ ತೊಂದರೆ ಎದುರಾಗಿರುವುದರಿಂದ ಕುಂಡಾಮೇಸ್ತ್ರಿ ಯೋಜನೆಯ ಸ್ಥಳದಿಂದ ಕೂಟುಹೊಳೆಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಮಡಿಕೇರಿ ನಗರದಲ್ಲಿ ಪ್ರತಿವರ್ಷ ಎಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದು ಸಹಜ. ಕಳೆದ ಎರಡು ವರ್ಷಗಳಿಂದ ಕುಂಡಾಮೇಸ್ತ್ರಿ ಯೋಜನೆಯ ನೀರನ್ನು ಬಳಕೆ ಮಾಡುತ್ತಿರುವುದರಿಂದ ಇತ್ತೀಚೆಗೆ ಅಷ್ಟೇನು ನೀರಿನ ಕೊರತೆ ನಗರವನ್ನು ಕಾಡಿರಲಿಲ್ಲ. ಅಲ್ಲದೆ ಟ್ಯಾಂಕರ್ ನೀರಿಗಾಗಿ ಹಣ ಪೋಲಾಗುವುದು ಕೂಡ ತಪ್ಪಿತ್ತು. ಆದರೆ ಪ್ರಸ್ತುತ ವರ್ಷ ಫೆಬ್ರವರಿ ಮೊದಲ ವಾರದಿಂದಲೇ ಕುಡಿಯುವ ನೀರಿನ ಬವಣೆ ಆರಂಭವಾಗಿದೆ. ನಗರದ ಬಹುತೇಕ ಭಾಗಕ್ಕೆ ನೀರನ್ನು ಒದಗಿಸುವ ಕೂಟುಹೊಳೆಯಲ್ಲಿ ನೀರಿನ ಪ್ರಮಾಣ ಸಂಪೂರ್ಣವಾಗಿ ಕುಸಿದಿದೆ. ಕುಂಡಾಮೇಸ್ತ್ರಿ ಯೋಜನೆಯ ಮೂಲಕ ನೀರು ಹರಿಸಿ ಈ ಕೊರತೆಯನ್ನು ತುಂಬಬಹುದಾಗಿತ್ತಾದರೂ ತಾಂತ್ರಿಕ ಅಡಚಣೆಯಿಂದಾಗಿ 300 ಎಚ್‌ಪಿ ಮೋಟಾರ್ ಕಾರ್ಯ ನಿರ್ವಹಿಸುತ್ತಿಲ್ಲ. ಕುಂಡಾಮೇಸ್ತ್ರಿಯಿಂದ ನೀರನ್ನು ಹರಿಸಬೇಕಾದರೆ ವಿದ್ಯುತ್ ಕೇಂದ್ರದಲ್ಲಿ ದುರಸ್ತಿ ಕಾರ್ಯ ನಡೆಯಬೇಕಾಗಿದೆ. ಹೂಳು ತುಂಬಿರುವ ಕೂಟುಹೊಳೆ: ಕೂಟುಹೊಳೆಯಲ್ಲಿ ಹೂಳು ತುಂಬಿರುವುದರಿಂದ ಮತ್ತು ಕಳೆದ ವರ್ಷ ಮಳೆಯ ಪ್ರಮಾಣ ಕಡಿಮೆಯಿದ್ದ ಕಾರಣ ನೀರಿನ ಪ್ರಮಾಣ ಜನವರಿ ತಿಂಗಳಿನಲ್ಲೇ ಇಳಿಕೆಯಾಗಿದೆ. ಇನ್ನು ಒಂದು ವಾರಕ್ಕಾಗುವಷ್ಟು ಮಾತ್ರ ನೀರಿದ್ದು, ಕುಂಡಾಮೇಸ್ತ್ರಿ ಯೋಜನೆಯ ನೀರನ್ನು ಹರಿಸದಿದ್ದಲ್ಲಿ ಕೂಟುಹೊಳೆ ಸಂಪೂರ್ಣವಾಗಿ ಬರಿದಾಗುವ ಸಾಧ್ಯತೆಗಳಿವೆ. ಕಳೆದ 10 ವರ್ಷಗಳಿಂದ ಹೂಳೆತ್ತದೇ ಇರುವುದರಿಂದ ಕೂಟುಹೊಳೆ ತುಂಬಾ ಹೂಳು ತುಂಬಿದೆ. ದುರಸ್ತಿಯಾಗದ ಪೈಪ್‌ಲೈನ್: ಫಿಲ್ಟರ್ ಹೌಸ್‌ನಿಂದ ಎಲೆಪೇಟೆಗೆ ಸರಬರಾಜಾಗುವ ನೀರಿನ ಬೃಹತ್ ಪೈಪ್‌ಲೈನ್ ಕಡಿತಗೊಂಡು ಅನೇಕ ದಿನಗಳೇ ಕಳೆದಿದ್ದರೂ ದುರಸ್ತಿ ಕಾರ್ಯ ಮಾತ್ರ ಆರಂಭಗೊಂಡಿಲ್ಲ.
ನಗರದ ಪ್ರಮುಖ ಬಡಾವಣೆಗಳಲ್ಲಿ ಕಳೆದ ಎರಡು ವಾರಗಳಿಂದ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು, ಸಾರ್ವಜನಿಕರು ನಗರಸಭೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಚ್ಚೆತ್ತುಕೊಳ್ಳದ ನಗರಸಭೆ: ಮಳೆಯ ಕೊರತೆಯಿಂದಾಗಿ ಈ ಬಾರಿ ಎರಡು ತಿಂಗಳಿಗೂ ಮೊದಲೇ ಕುಡಿಯುವ ನೀರಿನ ಸಮಸ್ಯೆ ನಗರವನ್ನು ಕಾಡಬಹುದೆನ್ನುವ ಬಗ್ಗೆ ಮುಂದಾಲೋಚನೆಯನ್ನು ಮಾಡದ ನಗರಸಭೆ ಇದೀಗ ಕೂಟುಹೊಳೆಯಲ್ಲಿ ನೀರು ಬರಿದಾಗುವ ಸಂದರ್ಭದಲ್ಲಿ ಎಚ್ಚೆತ್ತುಕೊಂಡಂತೆ ಕಂಡು ಬರುತ್ತಿದೆ. ಕುಂಡಾಮೇಸ್ತ್ರಿ ಯೋಜನೆಯ ಸ್ಥಿತಿಗತಿಯ ಬಗ್ಗೆ ಪರಿಶೀಲಿಸದೆ ಇರುವುದರಿಂದಲೇ ಆಗಸ್ಟ್ ತಿಂಗಳಿನಲ್ಲಿ ನಡೆದ ಕಾಪರ್ ವಯರ್ ಕಳ್ಳತನ ಪ್ರಕರಣ ಈಗಷ್ಟೆ ಬೆಳಕಿಗೆ ಬಂದಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಮನ್ವಯತೆಯ ಕೊರತೆ ಹಾಗೂ ನಿರ್ಲಕ್ಷವೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಲು ಕಾರಣವೆಂದು ವಿವಿಧ ಬಡಾವಣೆಗಳ ನಿವಾಸಿಗಳು ಆರೋಪಿಸಿದ್ದಾರೆ.





