ವಿಧಾನಸೌಧದ ಎದುರು ಬಸವೇಶ್ವರರ ಮೂರ್ತಿ ಪ್ರತಿಷ್ಠಾಪಿಸಲಿ:
ಸಾಹಿತಿ ರಂಜಾನ್ ದರ್ಗಾ

ಹರಪನಹಳ್ಳಿ, ಫೆ.9: ತಾನು ಮೂರ್ತಿ ಪ್ರಿಯನಲ್ಲ. ಆದರೂ, ಜಗತ್ತಿಗೆ ಒಳಿತನ್ನು ಸಾರಿದ ಜಗಜ್ಯೋತಿ ಬಸವೇಶ್ವರರ ಮೂರ್ತಿಯನ್ನು ವಿಧಾನಸೌಧ, ಲೋಕಸಭೆಯ ಎದುರು ಪ್ರತಿಷ್ಠಾಪಿಸಬೇಕಿತ್ತು ಎಂದು ಬೀದರ್‌ನ ಬಸವ ಅಧ್ಯಯನ ಪೀಠದ ಆಡಳಿತಾಧಿಕಾರಿ, ಸಾಹಿತಿ ರಂಜಾನ್ ದರ್ಗಾ ಅಭಿಪ್ರಾಯಪಟ್ಟರು.
ಅವರು ತಾಲೂಕಿನ ನೀಲಗುಂದ ಗ್ರಾಮದಲ್ಲಿ ನಡೆಯುತ್ತಿರುವ ತಾಲೂಕು ಮಟ್ಟದ 5ನೆ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಷಣ ಮಾಡಿದರು.
ಜಗಜ್ಯೋತಿ ಬಸವಣ್ಣನ ಮೂರ್ತಿ ಎಲ್ಲೆಲ್ಲೋ ಇರುವುದಕ್ಕಿಂತ ಪಾರ್ಲಿಮೆಂಟ್ ಮುಂದೆ ಇರಬೇಕು. ನಮ್ಮ ವಚನಗಳನ್ನು ಬಸವಾದಿ ಶರಣರು ಎಲ್ಲೆಡೆ ವಿಜೃಂಭಿಸಿದ್ದು, ಬಸವಾದಿ ಪ್ರಮುಖರಿಂದಾಗಿ ಕನ್ನಡ ಭಾಷೆಯಾಗಿ ಮಾರ್ಪಟ್ಟಿತು. ಜಗತ್ತಿನ ಕೇವಲ 15 ಪ್ರಮುಖ ಭಾಷೆಗಳಲ್ಲಿ ಕನ್ನಡವೂ ಒಂದು ಎಂದು ಅವರು ನುಡಿದರು.
ಧರ್ಮ ದೇವರಿಗಿಂತ ದೊಡ್ಡದಾದಾಗ ಸಮಾಜದಲ್ಲಿ ಕೋಮು ಗಲಭೆಗಳು ಆಗುತ್ತವೆ. ದೇವರಿಗಿಂತ ಧರ್ಮ ದೊಡ್ಡದಲ್ಲ ಎಂಬುದನ್ನು ಎಲ್ಲರೂ ಅರಿಯಬೇಕಿದೆ ಎಂದು ಹೇಳಿದರು.
ತೆಗ್ಗಿನಮಠದ ವರಸದ್ಯೋಜಾತ ಶ್ರೀ ಸಾನಿಧ್ಯ ವಹಿಸಿ ಮಾತನಾಡಿ, ಕನ್ನಡ ಭಾಷೆ ಅತ್ಯಂತ ಪ್ರಾಚೀನ ಹಾಗೂ ಸುಂದರ ಭಾಷೆಯಾಗಿದ್ದು, ಇಂತಹ ಅನೇಕ ಕಾರ್ಯಕ್ರಮ ಮಾಡುವ ಹಾಗೂ ದಿನನಿತ್ಯ ಜೀವನದಲ್ಲಿ ತಪ್ಪದೇ ಅಳವಡಿಸಿಕೊಳ್ಳುವ ಮೂಲಕ ಕನ್ನಡ ಭಾಷೆಯ ಉಳುವಿಗೆ ಎಲ್ಲರೂ ಶ್ರಮಿಸಬೇಕು ಎಂದು ಅವರು ನುಡಿದರು.
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಹಿತಿ ಬಿ.ಎನ್. ಮಲ್ಲೇಶ, ಇಂದಿನ ಕಾವ್ಯ ಸಂಪೂರ್ಣ ಸಂಕಷ್ಟದಲ್ಲಿದೆ. ಕಾವ್ಯ ಬರೆಯುವವರಿದ್ದರೂ ಕೇಳಿಸಿಕೊಳ್ಳುವಂತವರು ಯಾರೂ ಇಲ್ಲ ಎಂದು ವಿಷಾದಿಸಿದರು.
ಕವಿತೆಗಳ ಪುಸ್ತಕಗಳು ಖರೀದಿಯಾಗಲ್ಲ, ಒಂದೆರಡು ಮುದ್ರಣ ಮಾಧ್ಯಮಗಳು ಹೊರತು ಪಡಿಸಿದರೆ ಉಳಿದ ಪತ್ರಿಕೆಗಳು ಕವನಗಳನ್ನು ಪ್ರಕಟ ಮಾಡುವುದಿಲ್ಲ. ಕವನ ರಚನೆ ಆತ್ಮ ವೇದನೆಯಾಗಿ ಪರಿಣಮಿಸುತ್ತದೆ. ಪ್ರತಿಯೊಬ್ಬರೂ ಓದುವಂತಹ ಕವಿತೆ ಬರೆಯಬೇಕು ಎಂದು ಅವರು ಕವಿಗಳಿಗೆ ಸಲಹೆ ನೀಡಿದರು.
ಸಾಹಿತಿ ಇಸ್ಮಾಯೀಲ್ ಎಲಿಗಾರ ಆಶಯ ನುಡಿಗಳನ್ನಾಡಿದರು. ಉಪನ್ಯಾಸಕ ಎಚ್. ಮಲ್ಲಿಕಾರ್ಜುನ ಮಾತನಾಡಿದರು. 20ಕ್ಕೂ ಹೆಚ್ಚು ಕವಿಗಳು ಕವನವಾಚನ ಮಾಡಿದರು.
ಕಸಾಪ ತಾಲೂಕು ಅಧ್ಯಕ್ಷ ಡಿ. ರಾಮನಮಲಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯೆ ಕೆ.ಆರ್. ಜಯಶೀಲಾ, ರಶ್ಮಿ ರಾಜಪ್ಪ, ತಾಪಂ ಉಪಾಧ್ಯಕ್ಷ ಮಂಜನಾಯ್ಕ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬೇಲೂರು ಸಿದ್ದೇಶ, ಎಂ. ವಾಗೀಶ, ಇಸ್ಮಾಯಿಲ್ ಎಲಿಗಾರ ಉಪಸ್ಥಿತರಿದ್ದರು.







