ಆತ್ಮಹತ್ಯೆಗೆ ಯುವಕನ ವಿಫಲ ಯತ್ನ
ದಾವಣಗೆರೆ, ಫೆ.9: ವಿನಾಕಾರಣ ಪೊಲೀಸರು ತನ್ನ ಮೇಲೆ ನಿರಂತರ ಹಲ್ಲೆ ನಡೆಸುತ್ತಿದ್ದಾರೆ ಎಂದು ಮನನೊಂದ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಲ್ಲಿನ ನಿಟುವಳ್ಳಿಯಲ್ಲಿ ಗುರುವಾರ ನಡೆದಿದೆ.
ನಗರದ ನಿವಾಸಿ ಲೋಕಿಕೆರೆ ನಾಗರಾಜ(26) ಆತ್ಮಹತ್ಯೆಗೆ ಯತ್ನಿಸಿದ ಯುವಕ. ವಿಷ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದ ಈತನನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.
ಎರಡು ವರ್ಷಗಳ ಹಿಂದೆ ತಾಲೂಕಿನ ಹದಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಟ್ರ್ಯಾಕ್ಟರ್ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ನಾಗರಾಜನ ಸಹೋದರ ಅರುಣನ ಮೇಲೆ ದೂರು ದಾಖಲಾಗಿತ್ತು. ಅಪಘಾತ ಸಂಭವಿಸಿದಾಗಿನಿಂದಲೂ ಅರುಣ ತಲೆ ಮರೆಸಿಕೊಂಡಿದ್ದನು ಎನ್ನಲಾಗಿದೆ.
ತಲೆ ಮರೆಸಿಕೊಂಡ ಅರುಣನ ಬಗ್ಗೆ ಮಾಹಿತಿ ನೀಡುವಂತೆ ನಾಗರಾಜನನ್ನು ಮಾಯಕೊಂಡ ಪೊಲೀಸ್ ಠಾಣೆಗೆ ಕರೆಸಿಕೊಂಡ ಅಲ್ಲಿನ ಅಧಿಕಾರಿ ಅವಾಚ್ಯವಾಗಿ ನಿಂದಿಸಿ, ಮನಬಂದಂತೆ ಥಳಿಸಿದ್ದಾರೆ. ಅರುಣ ಎಲ್ಲಿದ್ದಾನೆಂಬುದೇ ಗೊತ್ತಿಲ್ಲದ ತನ್ನ ಮೇಲೆ ಹಲ್ಲೆ ಮಾಡಿ, ಅವಾಚ್ಯವಾಗಿ ನಿಂದಿಸಿದ್ದರಿಂದ ನಾಗರಾಜ ತೀವ್ರ ಮನನೊಂದು, ವಿಷ ಸೇವಿಸಿದ್ದಾನೆ ಎನ್ನಲಾಗಿದೆ.
ನಾಗರಾಜ ವಿಷ ಸೇವಿಸಿ, ಅಸ್ವಸ್ಥನಾಗಿದ್ದನ್ನು ಕಂಡು ತಕ್ಷಣವೇ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಕೆಟಿಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







