ತನ್ನದೇ ಲೋಟದ ಜೊತೆ ಬಂದು ನೆಲದಲ್ಲೇ ಕೂತು ಮತ ಕೇಳುವ ಬಿಜೆಪಿಯ ದಲಿತ ಅಭ್ಯರ್ಥಿ !

ಹತ್ರಾಸ್,ಫೆ.9: ಹತ್ರಾಸ್‌ನ ಇಗ್ಲಾಸ್ ಮೀಸಲು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ ರಾಜವೀರ ದಿಲೇರ್ ಮೇಲ್ಜಾತಿಗಳವರ ಮನೆಗಳಿಗೆ ಮತಯಾಚನೆಗೆ ತೆರಳಿದಾಗ ನೆಲದಲ್ಲಿಯೇ ಕುಳಿತುಕೊಳ್ಳುತ್ತಾರೆ. ಅಷ್ಟೇ ಅಲ್ಲ, ಮನೆಯವರು ಚಹಾ ನೀಡಿದಾಗ ತನ್ನ ಬಳಿಯಿರುವ ಸ್ಟೀಲ್ ಲೋಟದಲ್ಲಿ ಅದನ್ನು ಹಾಕಿಸಿಕೊಂಡು ಕುಡಿಯುತ್ತಾರೆ. ಅವರು ಏನು ಮರೆತರೂ ಈ ಲೋಟ ಮಾತ್ರ ಮರೆಯುವುದಿಲ್ಲ. ಮೇಲ್ಜಾತಿಯವರ ಮನೆಯ ಲೋಟವನ್ನು ದಲಿತ ವ್ಯಕ್ತಿ ಬಳಸಿದರೆ ಅದು ‘ಅಶುದ್ಧ ’ಗೊಳ್ಳುತ್ತದೆ....ಅದೂ ಜಾತೀಯತೆಯನ್ನು ತೊಲಗಿಸುವುದೇ ಎಲ್ಲ ರಾಜಕೀಯ ಪಕ್ಷಗಳ ಮುಖ್ಯ ಅಭಿಯಾನವಾಗಿರುವಾಗ!
ತನ್ನ ಪಕ್ಷದ ಸಾಮಾಜಿಕ ಸಮಾನತೆ ಸಂದೇಶವನ್ನು ರವಾನಿಸಲು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಇತ್ತೀಚಿಗೆ ಉತ್ತರ ಪ್ರದೇಶದಾದ್ಯಂತ ಚುನಾವಣಾ ಪ್ರವಾಸದ ಸಂದರ್ಭ ದಲಿತರೊಂದಿಗೆ ‘ಸಹಭೋಜನ ’ಮಾಡಿದ್ದಾರೆ. ಹೀಗಿರುವಾಗ ಇತರೆಡೆಗಳ ದಲಿತರಿಗಿಂತ ಭಿನ್ನವಾಗಿ ನಡೆದುಕೊಳ್ಳುವ ಶಾ ಪಕ್ಷದವರೇ ಆಗಿರುವ ದಿಲೇರ್ ಮಾತ್ರ ಜಾತಿ ಸಂಕೋಲೆಯಿಂದ ಹೊರಬರಲು ಬಯಸುತ್ತಿಲ್ಲ.
ಇಗ್ಲಾಸ್‌ನಲ್ಲಿ ಸುಮಾರು 90,000 ದಷ್ಟಿರುವ ಜಾಟ್ ಮತದಾರರು ಪ್ರಾಬಲ್ಯ ಹೊಂದಿದ್ದಾರೆ. ಹೀಗಾಗಿ ಕ್ಷೇತ್ರದ ಇತರ ದಲಿತ ಅಭ್ಯರ್ಥಿಗಳೂ ಮೇಲ್ಜಾತಿಗಳ ಮತದಾರರನ್ನು ಗೌರವಿಸುತ್ತಾರಾದರೂ ದಿಲೇರ್ ಮಾತ್ರ ಅತಿರೇಕದ ಗೌರವ ನೀಡುತ್ತಾರೆ. ನೆಲದ ಮೆಲೆ ಕುಳಿತುಕೊಂಡು ತನ್ನದೇ ಲೋಟದಲ್ಲಿ ಚಹಾ ಕುಡಿಯುವುದು ‘ಪರಂಪರಾಗತ ಅಭ್ಯಾಸ ’ವಾಗಿದೆ ಎನ್ನುತ್ತಾರೆ. ತನ್ನ ಪ್ರತಿ ನಡೆಯಲ್ಲಿಯೂ ಈ ‘ಪರಂಪರಾಗತ ಅಭ್ಯಾಸ ’ವನ್ನು ಅವರು ಪಾಲಿಸುತ್ತಾರೆ. 50ರ ಹರೆಯದ ಈ ದಿಲೇರ್ ಮೇಲ್ಜಾತಿಯ ಜಾಟ್ ಪ್ರಧಾನ ಎದುರಿಗೆ ಸಿಕ್ಕಿದರೆ ಅವರು ತನಗಿಂತ ವಯಸ್ಸಿನಲ್ಲಿ ಚಿಕ್ಕವರಾದರೂ ಅವರ ಕಾಲು ಮುಟ್ಟಿ ನಮಸ್ಕರಿಸುತ್ತಾರೆ. ‘ನಾನೇನಾದರೂ ತಪ್ಪು ಮಾಡಿದ್ದರೆ ಹೇಳಿ. ನಾನು ಈ ಊರಿನ ಕಾವಲುಗಾರನಾಗಿರುತ್ತೇನೆ,ಶಾಸಕನಾಗಿ ಅಲ’್ಲ ಎಂದು ಹೇಳುತ್ತ ಮತ ಯಾಚಿಸುತ್ತಾರೆ.
ಜಾತಿ ಸಂಕೋಲೆಯಲ್ಲಿಯೇ ಬಂಧಿತನಾಗಿ ಉಳಿಯುವ ತನ್ನ ಇಚ್ಛೆಯನ್ನು ದಿಲೇರ್ ಸಮರ್ಥಿಸಿಕೊಂಡಿದ್ದಾರೆ.‘ನಾನೋರ್ವ ಭಂಗಿಯ ಮಗ. ನನ್ನಪ್ಪನೂ ಇದನ್ನೇ ಮಾಡುತ್ತಿದ್ದ. ನಾನು ಸಂಪ್ರದಾಯವನ್ನು ಮುರಿಯುವುದಿಲ್ಲ. ಬೇಕಾದರೆ ಇಡೀ ಜಗತ್ತೇ ಬದಲಾಗಲಿ,ನಾನು ಮಾತ್ರ ಬದಲಾಗುವುದಿಲ್ಲ ’ಎನ್ನುತ್ತಾರೆ.
ಭಂಗಿಗಳು ದಲಿತರಲ್ಲಿ ಅತ್ಯಂತ ಕೆಳಸ್ತರಕ್ಕೆ ಸೇರಿದ್ದಾರೆ. ಈ ‘ಸಂಪ್ರದಾಯ ’ವನ್ನು ದಿಲೇರ್ ತನ್ನ ತಂದೆ ಕಿಶನಲಾಲ್‌ರಿಂದ ಬಳುವಳಿಯಾಗಿ ಪಡೆದಿದ್ದಾರೆ. ಅಂದ ಹಾಗೆ ಕಿಶನಲಾಲ್ ಐದು ಬಾರಿ ಶಾಸಕ ಮತ್ತು ಒಂದು ಬಾರಿ ಸಂಸದರಾಗಿದ್ದರು!
ದಿಲೇರ್ ಬಳಸುವ ಕಪ್ಪುಬಣ್ಣದ ಬೊಲೆರೋ ವಾಹನವೂ ಜಾತಿ ಪಾರಮ್ಯಕ್ಕೆ ಸಾಕ್ಷಿಯಾಗಿದೆ. ಪ್ರಚಾರಕ್ಕೆ ತೆರಳುವಾಗ ದಿಲೇರ್ ಚಾಲಕನ ಪಕ್ಕದಲ್ಲಿ ಕುಳಿತಿದ್ದರೆ, ಅತ್ಯಂತ ಆರಾಮದಾಯಕವಾದ ಮಧ್ಯದ ಆಸನಗಳಲ್ಲಿ ಬ್ರಾಹ್ಮಣ ಜಗದೀಶ ಪ್ರಸಾದ್ ಮತ್ತು ಜಾಟ್ ಸಮುದಾಯದ ರಾಬಿನ್ ಚೌಧರಿ ಪ್ರತಿಷ್ಠಾಪನೆಗೊಳ್ಳುತ್ತಾರೆ. ಹಿಂದಿನ ಇಕ್ಕಟ್ಟಾದ ಎರಡು ಸೀಟುಗಳಲ್ಲಿ ದಲಿತ ಪ್ರಚಾರಿಕರಿಬ್ಬರು ಕುಳಿತುಕೊಳ್ಳುತ್ತಾರೆ.







