ವಿಮಾನದ ತುರ್ತು ಬಾಗಿಲನ್ನು ತೆರೆದ ಪ್ರಯಾಣಿಕ !

ಮುಂಬೈ,ಫೆ.10 : ಮುಂಬೈಯಿಂದ ಚಂಡಿಗಡಕ್ಕೆ ಹಾರಾಟ ನಡೆಸಲಿದ್ದ ಇಂಡಿಗೋ ವಿಮಾನ ಹೊರಡಲು ಕೆಲವೇ ಕ್ಷಣಗಳಿರುವಾಗ ಅದರ ಪ್ರಯಾಣಿಕನೊಬ್ಬ ತುರ್ತು ನಿರ್ಗಮನ ಬಾಗಿಲನ್ನು ತೆರೆದ ಘಟನೆ ಇಂದು ಬೆಳಿಗ್ಗೆ ನಡೆದಿದ್ದು ಆತನ ಪಕ್ಕದಲ್ಲಿದ್ದ ಇನ್ನೊಬ್ಬ ಪ್ರಯಾಣಿಕನಿಗೆ ಗಾಯಗಳಾಗಿವೆ.
ಆರೋಪಿ ಪ್ರಯಾಣಿಕನ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು ಆತ ಸುರಕ್ಷಾ ಕ್ರಮಗಳನ್ನು ಉಲ್ಲಂಘಿಸಿದ್ದಾನೆಂದು ದೂರಲಾಗಿದೆ. ವಿಮಾನ ಟ್ಯಾಕ್ಸಿ-ವೇ ನಲ್ಲಿ ಸಾಗುತ್ತಿದ್ದಾಗ ಸೀಟು ಸಂಖ್ಯೆ 12ಸಿ ಯಲ್ಲಿ ಕುಳಿತಿದ್ದ ಪ್ರಯಾಣಿಕನೊಬ್ಬ ಒಮ್ಮೆಗೇ ತುರ್ತು ದ್ವಾರವನ್ನು ತೆರೆದ ಪರಿಣಾಮ ಅಪಘಾತದ ಸಂದರ್ಭ ಉಪಯೋಗಿಸಲ್ಪಡುವ ಪ್ಯಾರಾಚೂಟುಗಳು ಕೆಳಕ್ಕೆ ಬಿದ್ದವು. ಈ ಸಂದರ್ಭ ಸೀಟು ಸಂಖ್ಯೆ 12 ಎ ಯಲ್ಲಿ ಕುಳಿತಿದ್ದ ಪ್ರಯಾಣಿಕರೊಬ್ಬರಿಗೆ ಗಾಯಗಳಾಗಿವೆ. ಘಟನೆಯ ಬಗ್ಗೆ ಪೈಲಟ್ ಗೆ ಕೂಡಲೇ ಮಾಹಿತಿ ನೀಡಲಾಗಿ ಅವರು ವಿಮಾನದ ಇಂಜಿನನ್ನು ತಕ್ಷಣ ನಿಲ್ಲಿಸಿ ಬಿಟ್ಟರು.
ವಿಮಾನದಲ್ಲಿ ಸುಮಾರು 176 ಪ್ರಯಾಣಿಕರಿದ್ದರು. ಘಟನೆಯಿಂದಾಗಿ ವಿಮಾನ ಎರಡು ಗಂಟೆ ತಡವಾಗಿ ತನ್ನ ಹಾರಾಟ ಆರಂಭಿಸಿತು. ಆರೋಪಿ ಪ್ರಯಾಣಿಕನನ್ನು ವಿಮಾನ ನಿಲ್ದಾಣದ ಭದ್ರತೆಯ ಜವಾಬ್ದಾರಿ ಹೊತ್ತ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ ಸಿಬ್ಬಂದಿಗೆ ಒಪ್ಪಿಸಲಾಯಿತು.





