ಭಾರತೀಯರಿಗೆ ಗಲ್ಲು: ದಯಾಅರ್ಜಿ ಸಲ್ಲಿಸಿದ ಕೇಂದ್ರ
ದೋಹ, ಫೆ.10: ಸ್ವದೇಶಿ ವೃದ್ಧೆಯನ್ನು ಕೊಲೆಮಾಡಿದ ಪ್ರಕರಣದಲ್ಲಿ ಕತರ್‌ನಲ್ಲಿ ಗಲ್ಲುಶಿಕ್ಷೆಗೀಡಾದ ಮೂವರು ತಮಿಳ್ನಾಡಿನ ವ್ಯಕ್ತಿಗಳ ಶಿಕ್ಷೆಯಲ್ಲಿ ಕಡಿತಗೊಳಿಸಬೇಕೆಂದು ಆಗ್ರಹಿಸಿ ಭಾರತದ ರಾಯಭಾರ ಕಚೇರಿ ಕತರ್‌ಗೆ ದಯಾಅರ್ಜಿ ಸಲ್ಲಿಸಿದೆ.
ಭಾರತದ ವಿದೇಶ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಈ ವಿಷಯನ್ನು ಬಹಿರಂಗಪಡಿಸಿದ್ದು, ನಾಲ್ಕೂವರೆ ವರ್ಷದ ಹಿಂದೆ 81ವರ್ಷದ ಕತರ್‌ನ ಮಹಿಳೆಯನ್ನು ಮೂರು ಮಂದಿ ಸೇರಿ ಕ್ರೂರವಾಗಿ ಕೊಂದು ಹಾಕಿದ್ದರು. 2014 ಡಿಸೆಂಬರ್‌ನಲ್ಲಿಕತರ್ ನ ಪರಮೋಚ್ಚ ಕೋರ್ಟು ಮೂವರಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ತೀರ್ಪು ನೀಡಿತ್ತು. ಹಲವಾರು ಬಾರಿ ವಿಚಾರಣೆಯ ಬಳಿಕ ಭಾರತೀಯರಾದ ಸುಬ್ರಹ್ಮಣ್ಯನ್, ಅಳಗಪ್ಪನ್, ಚಿಲ್ಲದೊರೈ ಪೆರುಮಾಳ್‌ರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು.
ಕೇಸಿನಲ್ಲಿ ಆರೋಪಿಯಾದ ಶಿವಕುಮಾರ್ ಪೆರುಮಾಳ್‌ನ ಗಲ್ಲನ್ನು ನಂತರ ಜೀವಾವಧಿ ಜೈಲುಶಿಕ್ಷೆಗೆ ಇಳಿಸಲಾಗಿತ್ತು. ಆರೋಪಿಗಳು ಕೆಲಸಮಾಡುತ್ತಿದ್ದ ನಿರ್ಮಾಣ ಕಾಮಗಾರಿ ಸೊಸೈಟಿಯ ಹತ್ತಿರದ ಮನೆಯ ವೃದ್ಧೆಯನ್ನು ಇವರು ಕೊಲೆ ಮಾಡಿದ್ದರು. ವೃದ್ಧೆಯೊಂದಿಗೆ ಸೌಹಾರ್ದ ಸಂಬಂಧಹೊಂದಿದ್ದ ಆರೋಪಿಗಳು ವೃದ್ಧೆ ರಮಝಾನ್ ತಿಂಗಳಲ್ಲಿ ಆಹಾರ ಕೊಡಲು ಕರೆದಿದ್ದರು. ಆರೋಪಿಗಳು ಒಟ್ಟು ಸೇರಿ ವೃದ್ಧೆಯನ್ನು ಕೊಂದಿದ್ದಾರೆಂದು ಪ್ರಕರಣ ದಾಖಲಾಗಿತ್ತು.
ಕತರ್ ಸುಪ್ರೀಂಕೋರ್ಟು ಗಲ್ಲುಶಿಕ್ಷೆಗೆ ಅನುಮೋದನೆಯನ್ನೂ ನೀಡಿತ್ತು. ನಂತರ ತಮಿಳ್ನಾಡಿನ ನಿವಾಸಿಗಳ ಗಲ್ಲುಶಿಕ್ಷೆಯು ವಿದೇಶ ಸಚಿವೆ ಸುಷ್ಮಾಸ್ವರಾಜ್‌ರ ಗಮನಕ್ಕೆ ಬಂದಾಗ ಪ್ರಕರಣದ ವಿವರವನ್ನು ಅವರು ರಾಯಭಾರ ಕಚೇರಿಯಿಂದ ಪಡೆದಿದ್ದರು. ನಂತರ ರಾಯಭಾರ ಕಚೇರಿ ಪ್ರಕರಣದ ಕುರಿತ ವರದಿಯನ್ನು ನೀಡಿತ್ತು. ಆರೋಪಿಗಳ ಸಂಬಂಧಿಕರು ಸುಷ್ಮಾಸ್ವರಾಜ್‌ರ ಮೊರೆಹೋಗಿ ಅವರನ್ನು ರಕ್ಷಿಸಬೇಕೆಂದು ವಿನಂತಿಸಿಕೊಂಡಿದ್ದರು. ಅಂತಿಮವಾಗಿ ಆರೋಪಿಗಳ ಶಿಕ್ಷೆ ಕಡಿತಗೊಳಿಸಲಿಕ್ಕಾಗಿ ದಯಾಅರ್ಜಿಯನ್ನು ರಾಯಭಾರ ಕಚೇರಿ ಸಲ್ಲಿಸಿದೆ ಎಂದುವರದಿ ತಿಳಿಸಿದೆ.







