ಅಗ್ನಿ ಶ್ರೀಧರ್ ಗೆ ತಾತ್ಕಾಲಿಕ ರಿಲೀಫ್
15 ದಿನಗಳ ಮಧ್ಯಂತರ ನಿರೀಕ್ಷಣಾ ಜಾಮೀನು ಬೆಂಗಳೂರಿನ ಸೆಷನ್ಸ್ ನ್ಯಾಯಾಲದಿಂದ ಮಂಜೂರು

ಬೆಂಗಳೂರು, ಫೆ.11: ಪತ್ರಕರ್ತ ಅಗ್ನಿಶ್ರೀಧರ್ ಗೆ ನಗರದ ಸೆಷನ್ಸ್ ನ್ಯಾಯಾಲಯದಿಂದ ಮಧ್ಯಂತರ ನಿರೀಕ್ಷಣಾ ಜಾಮೀನು ದೊರಕಿದ್ದು, ಇದರೊಂದಿಗೆ ಅವರಿಗೆ ತಾತ್ಕಾಲಿಕವಾಗಿ ರಿಲೀಫ್ ಸಿಕ್ಕಿದೆ.
ಬೆಂಗಳೂರಿನ ಸೆಷನ್ಸ್ ನ್ಯಾಯಾಲಯವು ಹದಿನೈದು ದಿನಗಳ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ.
ಕಡಬಗೆರೆ ಶ್ರೀನಿವಾಸ್ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದ ಆರೋಪಿಗಳಿಗೆ ಅಗ್ನಿಶ್ರೀಧರ್ ಆಶ್ರಯ ನೀಡಿದ್ದಾರೆಂಬ ಆರೋಪದಲ್ಲಿ ಅಗ್ನಿಶ್ರೀಧರ್ ಮನೆಗೆ ಫೆ.7ರಂದು ಪೊಲೀಸ್ ದಾಳಿ ನಡೆದಿತ್ತು. ಈ ಸಂದರ್ಭದಲ್ಲಿ ವಿಚಾರಣೆ ವೇಳೆ ಅಗ್ನಿಶ್ರೀಧರ್ ಅವರಿಗೆ ಏರಿದ ರಕ್ತದೊತ್ತಡ ಮತ್ತು ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಕುಮಾರ ಸ್ವಾಮಿ ಲೇಔಟ್ ನಲ್ಲಿರುವ ಸಾಗರ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ, ಆರೋಪಿಗಳಿಗೆ ಆಶ್ರಯ ನೀಡಿದ ಆರೋಪದಲ್ಲಿ ಅಗ್ನಿ ಶ್ರೀಧರ್ ಪೊಲೀಸರಿಂದ ಬಂಧನ ಭೀತಿ ಎದುರಿಸುತ್ತಿದ್ದರು. ಇದಕ್ಕಾಗಿ ಅವರು ನಿರೀಕ್ಷಣಾ ಜಾಮೀನು ಪಡೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.





