1963ರಲ್ಲಿ ಗಡಿಯಲ್ಲಿ ನುಸುಳಿದ್ದ ಚೀನಿ ಯೋಧನ ಸ್ವದೇಶ ಭೇಟಿಗೆ ಸರಕಾರದ ನೆರವು

ಹೊಸದಿಲ್ಲಿ,ಫೆ.10: 1963ರಲ್ಲಿ ಭಾರತದ ಗಡಿಯನ್ನು ದಾಟಿದ್ದ ಚೀನಿ ಸೈನಿಕ ವಾಂಗ್ ಕಿ ತನ್ನ ಒಡಹುಟ್ಟಿದವರನ್ನು ಭೇಟಿಯಾಗಲು ಚೀನಾಕ್ಕೆ ತೆರಳಲು ಸರಕಾರವು ನೆರವಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ ಸ್ವರೂಪ್ ಅವರು ಇಲ್ಲಿ ತಿಳಿಸಿದರು.
1960ರಲ್ಲಿ ಚೀನಿ ಸೇನೆಯನ್ನು ಸೇರಿದ್ದ ವಾಂಗ್ 1962ರ ಯುದ್ಧದಲ್ಲಿ ಭಾರತದ ವಿರುದ್ಧ ಹೋರಾಡಿದ್ದ. ಯುದ್ಧದ ಬಳಿಕ 1963,ಜನವರಿಯಲ್ಲಿ ಭಾರತದ ಗಡಿಯೊಳಗೆ ಆತನನ್ನು ಸೆರೆ ಹಿಡಿಯಲಾಗಿತ್ತು.
ಮಧ್ಯಪ್ರದೇಶದಲ್ಲಿ ವಾಸವಾಗಿರುವ ವಾಂಗ್(77) ಈಗ ಚೀನಾದಲ್ಲಿರುವ ತನ್ನ ಮೂವರು ಸಹೋದರರು ಮತ್ತು ಇಬ್ಬರು ಸಹೋದರಿಯರನ್ನು ಭೇಟಿಯಾಗಲು ಬಯಸಿದ್ದಾನೆ. ಪುತ್ರ ವಿಷ್ಣು ವಾಂಗ್, ಪುತ್ರಿ ಅನಿತಾ ವಾಂಖೇಡೆ, ಸೊಸೆ ನೇಹಾ ವಾಂಗ್ ಮತ್ತು ಮೊಮ್ಮಗ ಕನಕ್ ವಾಂಗ್ ಸೇರಿದಂತೆ ಕುಟುಂಬ ಸದಸ್ಯರೂ ವಾಂಗ್ ಜೊತೆ ತರಳಲಿದ್ದಾರೆ.
ವಾಂಗ್ ಮತ್ತು ಆತನ ಕುಟುಂಬದ ಚೀನಾ ಭೇಟಿಗೆ ನಾವು ನೆರವಾಗುತ್ತಿದ್ದೇವೆ. ಎಲ್ಲ ಔಪಚಾರಿಕತೆಗಳು ಪೂರ್ಣಗೊಳ್ಳುವಂತೆ ನೋಡಿಕೊಳ್ಳಲು ದಿಲ್ಲಿಯಲ್ಲಿರುವ ಚೀನಿ ರಾಯಭಾರಿ ಕಚೇರಿ ಮತ್ತು ಬೀಜಿಂಗ್‌ನಲ್ಲಿರುವ ಭಾರತದ ರಾಯಭಾರಿ ಕಚೇರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದ ಸ್ವರೂಪ್,ವಾಂಗ್ ಚೀನಾ ಭೇಟಿಗೆ ಯಾವುದೇ ‘ತಾಂತ್ರಿಕ ’ ಸಮಸ್ಯೆಯಿಲ್ಲ ಎಂದು ಸ್ಪಷ್ಟಪಡಿಸಿದರು.
ಭಾರತ ಮತ್ತು ಚೀನಾ ಸರಕಾರಗಳಿಂದ ತನ್ನ ಚೀನಾ ಭೇಟಿಗೆ ಅನುಮತಿ ಪಡೆಯಲು ವಾಂಗ್ ಪ್ರಯತ್ನಿಸುತ್ತಿದ್ದ. ಬಿಬಿಸಿ ಇತ್ತೀಚಿಗೆ ತನ್ನ ವಿಶೇಷ ವರದಿಯೊಂದ ರಲ್ಲಿ ವಾಂಗ್ ಬವಣೆಯನ್ನು ಪ್ರಮುಖವಾಗಿ ಬಿಂಬಿಸಿತ್ತು. ನಂತರ ಚೀನಿ ಸರಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ವಾಂಗ್ ತಾಯ್ನ್‌ಡಿಗೆ ಮರಳಲು ನೆರವಾದರೆ ಅದು ಭಾರತ-ಚೀನಾ ಸಂಬಂಧ ಮತ್ತು ಪರಸ್ಪರ ತಿಳುವಳಿಕೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿತ್ತು. ಚೀನಾದ ಸಾಮಾಜಿಕ ಮಾಧ್ಯಮಗಳಲ್ಲಿಯೂ ವಾಂಗ್‌ಗೆ ಭಾರೀ ಬೆಂಬಲ ಹರಿದು ಬರುತ್ತಿದೆ ಎಂದೂ ಅದು ತಿಳಿಸಿತ್ತು.







