ಸರ್ಜರಿ ವೇಳೆ ರಕ್ತ ಸ್ತ್ರಾವಗೊಂಡ ರೋಗಿ ಮಂಗಳೂರು ಆಸ್ಪತ್ರೆಯಲ್ಲಿ ಮೃತ್ಯು
ಸರ್ಜರಿ ಮಾಡಿದ ಪುತ್ತೂರಿನ ವೈದ್ಯರ ವಿರುದ್ಧ ಪ್ರಕರಣ ದಾಖಲು

ಪುತ್ತೂರು,ಫೆ.10: ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಸರ್ಜರಿ ವೇಳೆ ತೀವ್ರ ರಕ್ತ ಸ್ತ್ರಾವಗೊಂಡು ಚಿಂತಾಜನಕಗೊಂಡ ರೋಗಿಯೋರ್ವರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಗುರುವಾರ ನಡೆದಿದೆ. ಮೃತರ ಪುತ್ರಿ ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆಯಲ್ಲಿ ವೈದ್ಯರ ವಿರುದ್ಧ ಪ್ರಕರಣ ದಾಖಲಾಗಿದೆ.
ಹಿರೇಬಂಡಾಡಿ ಬಾರ್ಲ ನಿವಾಸಿ ನಾರ್ಣಪ್ಪ ಗೌಡ(45) ಮೃತಪಟ್ಟವರು. ನಾರ್ಣಪ್ಪ ಗೌಡರ ಕುತ್ತಿಗೆಯ ಬಲ ಭಾಗದಲ್ಲಿ ಗೆಡ್ಡೆ ಇರುವುದಕ್ಕೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಫೆ. 7ರಂದು ಅವರಿಗೆ ಕುತ್ತಿಗೆಯ ಬಲಭಾಗದ ಗೆಡ್ಡೆ ತೆಗೆಯಲು ಸರ್ಜರಿ ಮಾಡಲಾಯಿತು. ಸರ್ಜರಿ ಸಮಯದಲ್ಲಿ ಕುತ್ತಿಗೆಯ ರಕ್ತನಾಳ ತುಂಡಾಗಿರುವುದಿಂದ ತೀವ್ರ ರಕ್ತಸ್ತ್ರಾವ ಆಗಿತ್ತು. ಅವರಿಗೆ ರಕ್ತ ನೀಡಲಾಯಿತ್ತಾದರೂ ಚಿಂತಾಜನಕರಾಗಿದ್ದ ಅವರನ್ನು ಫೆ. 8ರಂದು ಮಂಗಳೂರಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು. ಅಲ್ಲಿ ಚಿಕಿತ್ಸೆಗೆ ಸ್ಪಂಧಿಸದ ಅವರು ಫೆ. 9ರಂದು ಮೃತಪಟ್ಟಿದ್ದಾರೆ.
ಸರ್ಜರಿ ವೇಳೆ ವೈದ್ಯರ ನಿರ್ಲಕ್ಷ್ಯತನದಿಂದ ತನ್ನ ತಂದೆ ಮೃತಪಟ್ಟಿರುವುದಾಗಿ ನಾರ್ಣಪ್ಪ ಗೌಡರ ಪುತ್ರಿ ಕಾವ್ಯ ನಗರ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ವೈದ್ಯರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.







