ಅ.ಭಾ. ಹರಿದಾಸ ಸಮ್ಮೇಳನ ಉದ್ಘಾಟನೆ

ಉಡುಪಿ, ಫೆ.10: ದಾಸ ಪರಂಪರೆಯಲ್ಲಿ ಬಂದ ಮಹಾನುಭಾವರು ತೋರಿದ ಭಕ್ತಿ ಮಾರ್ಗದಲ್ಲಿ ಜನರು ಮುನ್ನಡೆಯಬೇಕು ಎಂದು ಪರ್ಯಾಯ ಶ್ರೀಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಕರೆ ನೀಡಿದ್ದಾರೆ. ಶುಕ್ರವಾರ ರಾಜಾಂಗಣದಲ್ಲಿ ಪುರಂದರದಾಸರ ಆರಾಧನೋತ್ಸವದ ಅಂಗವಾಗಿ ಪ್ರಾರಂಭಗೊಂಡ ಮೂರು ದಿನಗಳ ಅಖಿಲ ಭಾರತ ಹರಿದಾಸ ಸಮ್ಮೇಳನವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ತಮ್ಮ ಪರ್ಯಾಯ ಆರಂಭವಾದದ್ದು ಮಧ್ವನವಮಿಯಂದು. ಮುಂದಿನ ವರ್ಷ ಪರ್ಯಾಯ ಕೊನೆಯಾಗುತ್ತಿರುವುದು ಪುರಂದರದಾಸರ ಪುಣ್ಯತಿಥಿ ಯಂದು. ಅಪರೋಕ್ಷಜ್ಞಾನಿಗಳ ಅನುಗ್ರಹದಿಂದ ಇವು ನಡೆಯುತ್ತಿದೆ ಎಂು ಪೇಜಾವರಶ್ರೀಗಳು ಹೇಳಿದರು.
ತಮ್ಮ ಪರ್ಯಾಯಾವಧಿಯಲ್ಲಿ ಹೆಚ್ಚು ಹೆಚ್ಚು ಭಕ್ತರು ಇಲ್ಲಿಗೆ ಬಂದು ಕೀರ್ತನೆ, ಪ್ರವಚನವನ್ನು ನಡೆಸುತ್ತಿರುವುದು ಕೃಷ್ಣನಿಗೆ ಪ್ರಿಯ ಎಂದ ಸ್ವಾಮೀಜಿ, ಈ ಸಮ್ಮೇಳನದ ಪ್ರೇರಕಶಕ್ತಿಯಾದ ಮೈಸೂರಿನ ಗುರುಗೋವಿಂದ ದಾಸರಿಗೂ ತಮಗೂ ಇದ್ದ ಸಂಬಂಧವನ್ನು ಸ್ಮರಿಸಿಕೊಂಡರು.
ಅದೋನಿ ಸಮೀಪದ ಪುರಂದರಾಶ್ರಮ ಮುಖ್ಯಸ್ಥ ಹರಿನಾರಾಯಣದಾಸರು (ಹನುಮಂತ ರಾವ್) ಸ್ವಾಗತಿಸಿದರೆ, ಸರ್ವಾಧಾರವಿಠಲದಾಸರು (ಪರಗಿ ವಸಂತಕುಮಾರ್) ಪ್ರಸ್ತಾವಿಕ ಮಾತನಾಡಿದರು. ಮಂಡ್ಯದ ವರಾಹವಿಠಲ ದಾಸ್ ಕಾರ್ಯಕ್ರಮ ನಿರ್ವಹಿಸಿದರು.







