ಪಾಕ್ ಗೆ ಮಿಲಿಟರಿ ಮಾಹಿತಿ ನೀಡಿದ ಪ್ರಕರಣ - ಬಂಧಿತ ಬಿಜೆಪಿ ಪದಾಧಿಕಾರಿ : ಕಾಂಗ್ರೆಸ್

ಭೋಪಾಲ್, ಫೆ.2 : ಪಾಕಿಸ್ತಾನಕ್ಕೆ ದೇಶದ ಮಿಲಿಟರಿ ಮಾಹಿತಿ ಸೋರಿಕೆ ಮಾಡುತ್ತಿದ್ದ ಆರೋಪದಲ್ಲಿ ಬಂಧಿತರಲ್ಲಿ ಒಬ್ಬ ಬಿಜೆಪಿ ಮಹಿಳಾ ನಾಯಕಿಯ ಸಂಬಂಧಿಯಾಗಿದ್ದು , ಇನ್ನೊಬ್ಬ ಧ್ರುವ ಸಕ್ಸೆನಾ ಸ್ವತಃ ಬಿಜೆಪಿ ಪದಾಧಿಕಾರಿಯಾಗಿದ್ದಾನೆ ಹಾಗು ಈತ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗೀಯ ಅವರ ಆಪ್ತ ಎಂದು ಮಧ್ಯ ಪ್ರದೇಶ ಕಾಂಗ್ರೆಸ್ ಸಮಿತಿಯ ವಕ್ತಾರ ಕೆಕೆ ಮಿಶ್ರ ಆರೋಪಿಸಿದ್ದಾರೆ.
ಧ್ರುವ ಸಕ್ಸೆನಾ ಬಿಜೆಪಿಯ ಐಟಿ ಸೆಲ್ ನ ಜಿಲ್ಲಾ ಸಂಯೋಜಕನಾಗಿದ್ದಾನೆ ಹಾಗು ಈತ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗೀಯ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಜೊತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಫೋಟೋಗಳನ್ನು ಕೆಕೆ ಮಿಶ್ರ ಬಿಡುಗಡೆ ಮಾಡಿದ್ದಾರೆ.
ಪಾಕಿಸ್ತಾನಕ್ಕೆ ದೇಶದ ಮಿಲಿಟರಿ ಮಾಹಿತಿಯನ್ನೇ ನೀಡುವ ದೇಶದ್ರೋಹಿ ಕೆಲಸ ಮಾಡುತ್ತಿರುವ ಕೇಸರಿ ಭಯೋತ್ಪಾದಕರ ಜೊತೆ ಬಿಜೆಪಿಯ ಹಿರಿಯ ಮುಖಂಡರಿಗೆ ನಂಟಿರುವುದು ಬಹಿರಂಗವಾಗಿದೆ ಎಂದು ಹೇಳಿರುವ ಮಿಶ್ರಾ , ಈಗ ಬಿಜೆಪಿ ಹಾಗು ಸಂಘ ಪರಿವಾರ ಯಾವ ಮುಖ ಹಿಡಿದು ದೇಶಪ್ರೇಮದ, ಹಿಂದುತ್ವದ ಮಾತನಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಈ ಹಿಂದೆ ಹಲವಾರು ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಆರೋಪಿಯಾಗಿರುವ ಶ್ಯಾಮ್ ಸಾಹು ಹಾಗು ರಾಮ್ ಕಾಲಸಂಗ್ರ ಅವರ ಮನೆಗೇ ಭೇಟಿ ನೀಡಿ ಅವರು ನಮ್ಮ ಕಾರ್ಯಕರ್ತರು ಎಂದು ಘಂಟಾಘೋಷವಾಗಿ ಸಾರಿ ಅವರಿಗೆ ಎಲ್ಲ ಆರ್ಥಿಕ ಹಾಗು ಕಾನೂನು ನೆರವು ನೀಡಿದ್ದರು ಎಂದು ಮಿಶ್ರ ಆರೋಪಿಸಿದರು.






