ಭೂಮಿಯ ಸಮೀಪದ ಕ್ಷುದ್ರಗ್ರಹಗಳ ಪತ್ತೆಗೆ ಹೊರಟ ಗಗನ ನೌಕೆ

ವಾಶಿಂಗ್ಟನ್, ಫೆ. 10: ಭೂಮಿಯ ಸಮೀಪದಲ್ಲಿರುವ ನಿಗೂಢ ಕ್ಷುದ್ರಗ್ರಹಗಳಿಗಾಗಿ ನಾಸಾ ಬಾಹ್ಯಾಕಾಶ ನೌಕೆಯೊಂದು ಶೋಧ ಆರಂಭಿಸಿದೆ. ಈ ಕ್ಷುದ್ರಗ್ರಹಗಳು ಭೂಮಿಯಿಂದ ವೀಕ್ಷಿಸಲು ಕಷ್ಟವಾಗುವ ಸೌರವ್ಯೆಹದ ಸ್ಥಳಗಳಲ್ಲಿ ಅಡ್ಡಾಡುತ್ತಿರಬಹುದು ಎಂಬುದಾಗಿ ಶಂಕಿಸಲಾಗಿದೆ.
‘ಆಸಿರಿಸ್-ರೆಕ್ಸ್’ ಎಂಬ ಬಾಹ್ಯಾಕಾಶ ನೌಕೆಯು ‘ಬೆನ್ನು’ ಎಂಬ ಹೆಸರಿನ ಕ್ಷುದ್ರಗ್ರಹದ ಶೋಧಕ್ಕಾಗಿ ಎರಡು ವರ್ಷಗಳ ಯೋಜನೆಯೊಂದಿಗೆ ಹೊರಟಿದೆ. ಅದು ಈ ಕ್ಷುದ್ರಗ್ರಹಗಳ ಅಸ್ತಿತ್ವದ ಪುರಾವೆಗಾಗಿ ಸುಮಾರು ಎರಡು ವಾರಗಳನ್ನು ವ್ಯಯಿಸಲಿದೆ.
‘ಓಸಿರಿಸ್ ರೆಕ್ಸ್’ ಈಗ ಭೂಮಿಯ ನಾಲ್ಕನೆ ‘ಲ್ಯಾಗ್ರಾಂಜ್’ ಬಿಂದುವಿನ ಮೂಲಕ ಪ್ರಯಾಣಿಸುತ್ತಿದೆ. ಲ್ಯಾಗ್ರಾಜ್ ಬಿಂದು ನಮ್ಮ ಗ್ರಹದಿಂದ ಸುಮಾರು 15 ಕೋಟಿ ಕಿಲೋಮೀಟರ್ ದೂರದಲ್ಲಿದೆ.
ನೌಕೆಯು ತನ್ನ ಪ್ರಯಾಣದ ವೇಳೆ, ಈ ವಲಯದಲ್ಲಿ ಭೂಮಿಯನ್ನು ಹೋಲುವ ಕ್ಷುದ್ರಗ್ರಹಗಳನ್ನು ಗುರುತಿಸುವ ಸಲುವಾಗಿ ಚಿತ್ರಗಳನ್ನು ತೆಗೆಯಲಿದೆ.
ಇತರ ಗ್ರಹಗಳ ಸಮೀಪದಲ್ಲಿರುವ ಸಾವಿರಾರು ಕ್ಷುದ್ರಗಹಗಳನ್ನು ವಿಜ್ಞಾನಿಗಳು ಪತ್ತೆಹಚ್ಚಿರುವರಾದರೂ, ಈವರೆಗೆ ಭೂಮಿಗೆ ಸಮೀಪದ ಕ್ಷುದ್ರಗ್ರಹವೊಂದು ಪತ್ತೆಯಾಗಿರುವುದು ಒಂದು ಮಾತ್ರ.
ಭೂಮಿಯ ಕಕ್ಷೆಯನ್ನೇ ಹಂಚಿಕೊಂಡಿರುವ ಹೆಚ್ಚಿನ ಕ್ಷುದ್ರಗ್ರಹಗಳು ಇರಬೇಕು ಎಂದು ವಿಜ್ಞಾನಿಗಳು ಭಾವಿಸುತ್ತಾರೆ. ಆದರೆ, ಭೂಮಿಯ ಮೇಲಿನಿಂದ ಅವುಗಳನ್ನು ನೋಡುವುದು ಕಷ್ಟ. ಯಾಕೆಂದರೆ ಅವುಗಳು ಭೂಮಿಯ ದಿಗಂತದಲ್ಲಿ ಸೂರ್ಯನಿಗೆ ಹತ್ತಿರದಲ್ಲಿವೆ ಎಂಬಂತೆ ಕಾಣುತ್ತವೆ.







