ಲಾವಣ್ಯಳಿಗೆ ಬೇಕು ನೆರವಿನ ಆಸರೆ

ಮೂಡುಬಿದಿರೆ,ಫೆ.10: ಒಂದೂವರೆ ವರ್ಷದ ಮಗುವೊಂದು ಕಂಜೆನೆಟಲ್ ಇಥಿಯೋಸಿಸ್ ಎಂಬ ಚರ್ಮದ ಕಾಯಿಲೆಯಿಂದ ಬಳಲುತ್ತಿರುವ ಪ್ರಕರಣ ದರೆಗುಡ್ಡೆ ಗ್ರಾಮ ಪಂಚಾಯಿತಿ ಪಣಪಿಲ ಗ್ರಾಮದ ಪುಣಿಕೆದೊಟ್ಟು ಎಂಬಲ್ಲಿ ಕಂಡುಬಂದಿದೆ.ಇಲ್ಲಿನ ನಿವಾಸಿ ಹೋಟೆಲ್ ಕಾರ್ಮಿಕ ಜಗನ್ನಾಥ್ ಕುಮಾರ್ ಹಾಗೂ ಬೀಡಿ ಕಾರ್ಮಿಕೆ ಸಂಧ್ಯಾ ಪೂಜಾರಿ ದಂಪತಿಯ ಏಕ ಮಾತ್ರ ಪುತ್ರಿ ಒಂದೂವರೆ ವರ್ಷದ ಲಾವಣ್ಯ ಈ ಅನಾರೋಗ್ಯ ಪೀಡಿತ ಬಾಲಕಿ.
ದಂಪತಿಗೆ ಹುಟ್ಟಿದ ಮೊದಲ ಮಗುವೇ ಚರ್ಮದ ಈ ಭೀಕರ ಕಾಯಿಲೆಗೆ ತುತ್ತಾಗಿದೆ. ಕಾಯಿಲೆ ಕಾಣಿಸಿಕೊಂಡ ಪ್ರಾರಂಭದಿಂದಲೇ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಸಲಾಗುತ್ತಿದೆ. ಸುಮಾರು ಐದು ವರ್ಷಗಳ ಕಾಲ ಚಿಕಿತ್ಸೆ ಮುಂದುವರಿಸುವಂತೆ ವೈದಾಧಿಕಾರಿಯವರು ತಿಳಿಸಿದ್ದಾರೆ. ಮಳೆಗಾಲ ಹಾಗೂ ಬೇಸಿಗೆಯ ಸಮಯದಲ್ಲಿ ಹವಾಮಾನ ವೈಪರೀತ್ಯಗಳಿಂದಾಗಿ ಮಗುವಿನ ಆರೋಗ್ಯದಲ್ಲಿ ಏರಿಳಿತ ಕಂಡುಬರುತ್ತದೆ.
ಹೆಚ್ಚಿನ ಮೌಲ್ಯದ ಮದ್ದುಗಳನ್ನು ಮಗುವಿಗೆ ನೀಡಬೇಕಾಗಿರುವುದರಿಂದ ಹೆತ್ತವರಿಗೆ ಹಣದ ಅವಶ್ಯಕತೆಯಿದೆ. ಕಡಿಮೆ ಆದಾಯ ಹೊಂದಿರುವ ಮನೆಯವರು ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿದ್ದಾರೆ.ಈ ಮಗುವಿನ ಚಿಕಿತ್ಸೆಗಾಗಿ ಪ್ರತ್ಯೇಕ ವಾಹನದಲ್ಲಿ ಕರೆದೊಯ್ಯಬೇಕಾಗುತ್ತದೆ. ತಿಂಗಳಲ್ಲಿ ಎರಡು ಬಾರಿಯಾದರೂ ಆಸ್ಪತ್ರೆಗೆ ಹೋಗಬೇಕಾಗಿರುವುದರಿಂದ ಖರ್ಚು ವೆಚ್ಚಗಳು ಹೆಚ್ಚುತ್ತದೆ.
ತೀರಾ ಬಡತನ, ಮೂಲಭೂತ ಸೌಕರ್ಯವಿಲ್ಲದ ಸಣ್ಣ ಮನೆಯೊಂದರಲ್ಲಿ ವಾಸಿಸುತ್ತಿರುವ ದಂಪತಿ ಆರ್ಥಿಕ ಕಗ್ಗಂಟಿನಿಂದ ಜೀವನ ನಿರ್ವಹಿಸುತ್ತಿದ್ದಾರೆ.ಮಗುವಿನ ಆರೋಗ್ಯವನ್ನು ಜೋಪಾನದಿಂದ ಕಾಪಾಡಬೇಕಾಗಿರುವುದರಿಂದ ಮತ್ತಷ್ಟು ಆರ್ಥಿಕ ಸಹಾಯಬೇಕಾಗಿದೆ.
ಸಹೃದಯ ದಾನಿಗಳ ನೆರವು ಈ ಕುಟುಂಬಕ್ಕೆ ಅನಿವಾರ್ಯವಾಗಿದೆ.
ಬ್ಯಾಂಕ್ ಖಾತೆ ವಿವರ:
ಜಗನ್ನಾಥ ಕುಮಾರ್, ಕಾರ್ಪೊರೇಶನ್ ಬ್ಯಾಂಕ್
ಮೂಡುಮಾರ್ನಾಡು ಶಾಖೆ
ಎಸ್‌ಬಿ ಅಕೌಂಟ್ ನಂ. 160100101001788
ಐಎಪ್‌ಎಸ್‌ಸಿ ಕೋಡ್ ಸಿಓಆರ್‌ಪಿ0001601







