ನೋಟು ರದ್ದತಿಯ ಬಳಿಕ ನಕಲಿ ನೋಟುಗಳ ಕಳ್ಳಸಾಗಾಣಿಕೆ ಸ್ಥಗಿತ : ಪಿಎಸಿಗೆ ವಿತ್ತ ಸಚಿವಾಲಯದ ಹೇಳಿಕೆ

ಹೊಸದಿಲ್ಲಿ,ಫೆ.10: ನೋಟು ರದ್ದತಿಯ ಬಳಿಕ ನಕಲಿ ನೋಟುಗಳ ಕಳ್ಳ ಸಾಗಾಣಿಕೆ ಸಂಪೂರ್ಣವಾಗಿ ನಿಂತಿದೆ ಮತ್ತು ತೆರಿಗೆ ಇಲಾಖೆಯು ಜ.10ರವರೆಗೆ 114 ಕೋ.ರೂ.ಗಳ ಹೊಸ ಕರೆನ್ಸಿ ನೋಟುಗಳು ಸೇರಿದಂತೆ 515 ಕೋ.ರೂ.ನಗದನ್ನು ವಶಪಡಿಸಿಕೊಂಡಿದೆ ಎಂದು ವಿತ್ತ ಸಚಿವಾಲಯವು ಶುಕ್ರವಾರ ಸಾರ್ವಜನಿಕ ಲೆಕ್ಕಪತ್ರಗಳ ಸಂಸದೀಯ ಸಮಿತಿ (ಪಿಎಸಿ)ಗೆ ತಿಳಿಸಿತು.
2016,ನ.8 ಮತ್ತು ಡಿ.28ರ ನಡುವೆ ನಡೆಸಿದ ಶೋಧ ಮತ್ತು ಜಪ್ತಿ ಕಾರ್ಯಾಚರಣೆ ಗಳಲ್ಲಿ 4,172 ಕೋ.ರೂ.ಗಳ ಅಘೋಷಿತ ಆದಾಯವನ್ನೂ ಪತ್ತೆ ಹಚ್ಚಲಾಗಿದೆ ಎಂದೂ ಅದು ಸಮಿತಿಯ ವಿಚಾರಣೆಗಳಿಗೆ ಉತ್ತರವಾಗಿ ತಿಳಿಸಿದೆ ಎಂದು ಮೂಲಗಳು ತಿಳಿಸಿದವು.
ಕಾಂಗ್ರೆಸ್ ನಾಯಕ ಕೆ.ವಿ.ಥಾಮಸ್ ನೇತೃತ್ವದ ಪಿಎಸಿಯು ಹಣಕಾಸು ನೀತಿ ಮತ್ತು ನೋಟು ರದ್ದತಿಯ ಪರಿಣಾಮಗಳ ಬಗ್ಗೆ ಚರ್ಚಿಸಲು ಶುಕ್ರವಾರ ವಿತ್ತ ಸಚಿವಾಲಯದ ಪ್ರಮುಖ ಕಾರ್ಯದರ್ಶಿಗಳನ್ನು ತನ್ನೆದುರು ಕರೆಸಿತ್ತು.
ಈ ವೇಳೆ ನೋಟು ರದ್ದತಿಯ ಬಳಿಕ ಎಷ್ಟು ಹಳೆಯ ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿವೆ ಎಂದು ಥಾಮಸ್ ಪ್ರಶ್ನಿಸಿದ್ದು, ಆರ್‌ಬಿಐ ನೋಟುಗಳನ್ನು ಎಣಿಕೆ ಮಡುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ ಮತ್ತು ಸದ್ಯವೇ ಅಂಕಿಅಂಶಗಳನ್ನು ಬಿಡುಗಡೆ ಮಾಡಲಿದೆ ಎಂದು ಅಧಿಕಾರಿಗಳು ಉತ್ತರಿಸಿದ್ದಾರೆನ್ನಲಾಗಿದೆ.







