‘ಅವಿಭಜಿತ ಚೀನಾ’ ನೀತಿಯನ್ನು ಗೌರವಿಸಲು ಟ್ರಂಪ್ ಒಪ್ಪಿಗೆ

ವಾಶಿಂಗ್ಟನ್, ಫೆ. 10: ‘ಅವಿಭಜಿತ ಚೀನಾ’ ನೀತಿಯನ್ನು ಮಾನ್ಯ ಮಾಡಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಕೊಂಡಿದ್ದಾರೆ ಎಂದು ಶ್ವೇತಭವನ ಗುರುವಾರ ತಿಳಿಸಿದೆ.
ಫೋನ್‌ನಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜೊತೆಗೆ ಮಾತನಾಡಿದ ಟ್ರಂಪ್, ಆ ದೇಶದೊಂದಿಗಿನ ಸಂಬಂಧವನ್ನು ಸುಧಾರಿಸಲು ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಉಭಯ ನಾಯಕರ ನಡುವಿನ ಮೊದಲ ಸಂಪರ್ಕ ಇದಾಗಿದೆ.
ಇದಕ್ಕೂ ಮೊದಲು ತೈವಾನ್ ಅಧ್ಯಕ್ಷೆಯೊಂದಿಗೆ ಫೋನ್‌ನಲ್ಲಿ ಮಾತನಾಡುವ ಮೂಲಕ ಟ್ರಂಪ್ ಚೀನಾದ ಆಕ್ರೋಶಕ್ಕೆ ಗುರಿಯಾಗಿದ್ದುದನ್ನು ಸ್ಮರಿಸಬಹುದಾಗಿದೆ.ಗುರುವಾರ ರಾತ್ರಿ ಉಭಯ ನಾಯಕರು ಸುದೀರ್ಘ ಕಾಲ ಫೋನ್‌ನಲ್ಲಿ ಸಂಭಾಷಣೆ ನಡೆಸಿದರು ಎಂದು ಶ್ವೇತಭವನದ ಹೇಳಿಕೆಯೊಂದು ತಿಳಿಸಿದೆ.ಜಪಾನ್ ಪ್ರಧಾನಿ ಶಿಂರೊ ಅಬೆಯನ್ನು ಶ್ವೇತಭವನದಲ್ಲಿ ಭೇಟಿಯಾಗುವ ಕೆಲವೇ ಗಂಟೆಗಳ ಮೊದಲು ಈ ಮಾತುಕತೆ ನಡೆದಿದೆ.
‘‘ ‘ಅವಿಭಜಿತ ಚೀನಾ’ ನೀತಿಯ್ನನು ಗೌರವಿಸುವಂತೆ ಅಧ್ಯಕ್ಷ ಕ್ಸಿ ಮಾಡಿಕೊಂಡ ಮನವಿಯನ್ನು ಟ್ರಂಪ್ ಒಪ್ಪಿಕೊಂಡರು’’ ಎಂದು ಹೇಳಿಕೆ ತಿಳಿಸಿದೆ. ‘‘ಪರಸ್ಪರ ಸಂಬಂಧದ ವಿವಿಧ ವಿಷಯಗಳ ಬಗ್ಗೆ ಅಮೆರಿಕ ಮತ್ತು ಚೀನಾಗಳ ಪ್ರತಿನಿಧಿಗಳು ಮಾತುಕತೆಗಳನ್ನು ನಡೆಸಲಿದ್ದಾರೆ’’ ಎಂದಿದೆ.
ಅದೇ ವೇಳೆ, ಡೊನಾಲ್ಡ್ ಟ್ರಂಪ್‌ರ ಭರವಸೆಯನ್ನು ತಾನು ‘ಶ್ಲಾಘಿಸು’ವುದಾಗಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹೇಳಿದ್ದಾರೆ.





