ಮತದಾರರ ಪಟ್ಟಿಯಿಂದ ಹೆಸರು ಅಳಿಸಿ ಕಾಂಗ್ರೆಸ್ ಕುಟಿಲ ರಾಜಕೀಯ ತಂತ್ರಗಾರಿಕೆ ಮಾಡಿದೆ: ಸಂತೋಷ್ ಕುಮಾರ್ ಬೋಳಿಯಾರ್
ಉಳ್ಳಾಲ ನಗರಸಭೆ ವಾರ್ಡ್ ಉಪ ಚುನಾವಣೆ
ಉಳ್ಳಾಲ,ಫೆ.10: ಉಳ್ಳಾಲ ಪುರಸಭೆಯ 24ಹಾಗೂ 26ನೇ ವಾರ್ಡಿಗೆ ಫೆ. 12ರಂದು ನಡೆಯುವ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಬ್ಬರು ಜಯಗಳಿಸುವ ಹಂತದಲ್ಲಿದ್ದು, ನಿರಾಶೆಯಾದ ಕಾಂಗ್ರೆಸ್ ಮುಖಂಡರು ನಗರಸಭೆಯ ಅಧಿಕಾರಿಗಳ ಸಹಕಾರದಿಂದ ಮತದಾರರ ಪಟ್ಟಿಯಲ್ಲಿದ್ದ ಹೆಸರನ್ನು ಡಿಲಿಟ್ ಮಾಡುವಂತಹ ಕುಟಿಲ ರಾಜಕೀಯ ತಂತ್ರ ಮಾಡಿದ್ದಾರೆ ಎಂದು ಬಿಜೆಪಿ ಮಂಗಳೂರು ಕ್ಷೇತ್ರ ಆಧ್ಯಕ್ಷ ಸಂತೋಷ್ ಕುಮಾರ್ ರೈ ಬೊಳಿಯಾರು ಆರೋಪಿಸಿದರು.
ಅವರು ತೊಕ್ಕೊಟ್ಟಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದರು.
ನಗರಸಭೆಯ 24ಹಾಗೂ 26ನೇ ವಾರ್ಡ್ ಕಾಂಗ್ರೆಸ್ ಕೌನ್ಸಿಲರ್‌ಗಳು ಕೆಲವೊಂದು ಕಾರಣದಿಂದ ಅನರ್ಹಗೊಂಡಿದ್ದು ಮರು ಚುನಾವಣೆ ನಡೆಯುವ ಹಂತದಲ್ಲಿ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಕಾಂಗ್ರೆಸ್ ಮಾಡಿದ ತಂತ್ರ ಹೇಯ ಕೃತ್ಯವಾಗಿದೆ. ಒಂದು ನಗರಸಭೆಯ ಚುನಾವಣೆಯಲ್ಲಿ ಇಂತಹ ಕುಟಿಲ ತಂತ್ರ ಮಾಡಿದ್ದು, ಅದಕ್ಕೆ ಚುನಾಚಣೆ ಅಧಿಕಾರಿ ಕೈಜೋಡಿಸಿದ್ದಾರೆಂಬ ಎಂಬ ಸಂಶಯವಿದ್ದು ಕಾಂಗ್ರೆಸ್ ಕಳೆದ 65ವರ್ಷಗಳಲ್ಲಿ ಇಂತಹ ಕೃತ್ಯವನ್ನೇ ಮಾಡಿದೆ ಎಂಬುದರಲ್ಲಿ ಸಂಶಯವಿಲ್ಲ. ಉಳ್ಳಾಲದಲ್ಲಿ ಎರಡು ಸ್ಥಾನ ಬಿಜೆಪಿ ಪಾಲಾಗುತ್ತದೆ ಎಂಬ ಆತಂಕದಿಂದ ಇದ್ದಾರೆ. ಒಟ್ಟಿನಲ್ಲಿ ನಿದ್ರೆ ಇಲ್ಲದ ರಾತ್ರಿ ಎದುರಿಸುತ್ತಿದ್ದಾರೆ ಎಂದು ಆರೋಪಿಸಿದರು.
ನಗರಸಭೆಯ ನೂತನ ಮತದಾರರ ಪಟ್ಟಿಯಲ್ಲಿ ಗುರುವಾರ ಕಂಡುಬಂದಂತೆ ಸುಮಾರು 150ಮಂದಿಯ ಹೆಸರು ನಾಪತ್ತೆಯಾಗಿರುವ ಹಿಂದೆ ಕಾಣದ ಕೈ ಕೆಲಸ ಮಾಡಿದೆ. ಒಂದು ಪುಟದಲ್ಲಿ 36ಹೆಸರಿದ್ದು ಅದರಲ್ಲಿ ಬಿಜೆಪಿ ಪರವಾಗಿರುವ ಮತರದಾರರ ಹೆಸರನ್ನು ಗರಿಷ್ಠ ಸಂಖ್ಯೆಯಲ್ಲಿ ಡೆಲಿಟ್ ಮಾಡಲಾಗಿದೆ ಎಂದರು.
ಮಾಜಿ ಶಾಸಕ ಜಯರಾಮ ಶೆಟ್ಟಿ ಮಾತನಾಡಿ, ಮೇಲಾಧಿಕಾರಿಗಳು ಹಾಗೂ ಈಗಿನ ಸರಕಾರದ ಸಂಪೂರ್ಣ ಪಾತ್ರವಿದ್ದು ಅಭ್ಯರ್ಥಿಗೆ ಎರಡು ಬಿ. ಪಾರ್ಮ್ ಕೊಡುವುದೇ ಅಪರಾಧ. ನಾಮಿನೇಶನ್ ಪ್ರಕ್ರಿಯೆ ಮುಗಿದ ಬಳಿಕ ಹೆಸರು ಡೆಲಿಟ್ ಮಾಡುವ ಕಾನೂನಿನಲ್ಲಿ ಅವಕಾಶ ಇಲ್ಲ. ಇದ್ದರೂ ಮೃತಪಟ್ಟವರಿಗೆ ಮಾತ್ರ. ಹಾಗಾಗಿ ಕ್ಷೇತ್ರದ ಶಾಸಕರು, ಸಚಿವರು ತಕ್ಷಣ ಜಿಲ್ಲಾಧಿಕಾರಿ, ಚುನಾವಣಾ ಅಧಿಕಾರಿಗಳನ್ನು ಸಂಪರ್ಕಿಸಿ ತಪ್ಪು ಸರಿಪಡಿಸಲು ಮುಂದಾಗಬೇಕು. ಅನರ್ಹ ಅಭ್ಯರ್ಥಿಗಳೇ ಚುನಾವಣೆಗೆ ಸ್ಪರ್ಧಿಸುತ್ತಿದ್ದು ನಮಗೆ ನ್ಯಾಯ ಸಿಗಬೇಕು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಮೋಹನ್‌ರಾಜ್ ಕೆ.ಆರ್, ಕ್ಷೇತ್ರ ಮಾಜಿ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷ ಪೂಜಾ ಪೈ, ಅಲ್ಪಸಂಖ್ಯಾತ ಮೋರ್ಚಾದ ಉಸ್ಮಾನ್ ಹಾಜಿ, ಜಿಲ್ಲಾ ಕಾರ್ಯದರ್ಶಿ ನಮಿತಾ ಶ್ಯಾಂ, ಡಾ.ಮುನೀರ್ ಬಾವ, ಅಭ್ಯರ್ಥಿಗಳಾದ ಸತೀಶ್ ಚೆಂಬುಗುಡ್ಡೆ ಹಾಗೂ ಚಂದ್ರಹಾಸ್ ಪಂಡಿತ್‌ಹೌಸ್ ಉಪಸ್ಥಿತರಿದ್ದರು.







