ಹಲ್ಲೆ ಪ್ರಕರಣ: ಸರಕಾರಿ ಹಾಸ್ಟೆಲ್ ವಿದ್ಯಾರ್ಥಿಯ ಬಂಧನ, ಬಿಡುಗಡೆ
ಶಿವಮೊಗ್ಗ, ಫೆ. 10: ಸರಕಾರಿ ಹಾಸ್ಟೆಲ್‌ನಲ್ಲಿ ಗಲಾಟೆ ನಡೆಸಿ, ವಿದ್ಯಾರ್ಥಿ ಯೋರ್ವನ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಅದೇ ಹಾಸ್ಟೆಲ್‌ನ ವಿದ್ಯಾರ್ಥಿಯೋರ್ವನನ್ನು ಪೊಲೀಸರು ಬಂಧಿಸಿ, ಠಾಣಾ ಜಾಮೀನಿನ ಮೇಲೆ ಬಿಟ್ಟಿರುವ ಘಟನೆ ಜಿಲ್ಲೆಯ ಹೊಸನಗರ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದಲ್ಲಿರುವ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ವಸತಿ ನಿಲಯದಲ್ಲಿ ಈ ಘಟನೆ ನಡೆದಿದೆ. ಕೊಡಚಾದ್ರಿ ಕಾಲೇಜಿನಲ್ಲಿ ಅಂತಿಮ ಬಿಕಾಂ ಪದವಿಯಲ್ಲಿ ಅಭ್ಯಾಸ ಮಾಡುತ್ತಿದ್ದ ಆಶಿಕ್ (20) ಬಂಧನಕ್ಕೊಳಗಾಗಿ ಬಿಡುಗಡೆಯಾದ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.
ಅದೇ ಕಾಲೇಜಿನಲ್ಲಿ ಅಂತಿಮ ಬಿ.ಎ. ಪದವಿ ಅಭ್ಯಾಸ ಮಾಡುತ್ತಿದ್ದ ಪುನೀತ್(20) ಹಲ್ಲೆಗೊಳಗಾದ ವಿದ್ಯಾರ್ಥಿಯಾಗಿದ್ದು, ಈತ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಹಿಂದಿರುಗಿದ್ದಾನೆ. ಈ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಬ್ ಇನ್‌ಸ್ಪೆಕ್ಟರ್ ಅಶ್ವಿನ್‌ಕುಮಾರ್ ಹಾಸ್ಟೆಲ್‌ಗೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.
ಏನಾಯ್ತು?: ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿದ್ದು, ಈ ವೇಳೆ ಆರೋಪಿ ಆಶಿಕ್‌ನು ಹಾಸ್ಟೆಲ್‌ನಲ್ಲಿ ತರಕಾರಿ ಕತ್ತರಿಸಲು ಬಳಸುವ ಚಾಕುನಿಂದ ಪುನೀತ್ ಮೇಲೆ ದಾಳಿ ನಡೆಸಲು ಯತ್ನಿಸಿದ್ದ. ಸಹವರ್ತಿ ವಿದ್ಯಾರ್ಥಿಗಳು ಮಧ್ಯೆಪ್ರವೇಶಿಸಿ ಗಲಾಟೆ ತಹಬದಿಗೆ ತಂದಿದ್ದರು. ಗಾಯಗೊಂಡಿದ್ದ ಪುನೀತ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.







