ಮಲೆನಾಡಿನಲ್ಲಿ ತೀವ್ರವಾದ ಕುಡಿಯುವ ನೀರಿನ ಅಭಾವ
ಹಲವೆಡೆ ಟ್ಯಾಂಕರ್ ಮೂಲಕ ನೀರು ಪೂರೈಕೆ

30 ಕ್ಕೂ ಅಧಿಕ ಗ್ರಾಮಗಳಲ್ಲಿ ನೀರಿನ ಸಮಸ್ಯೆ
ಶಿವಮೊಗ್ಗ, ಫೆ. 10: ಈ ಬಾರಿಯ ಬೇಸಿಗೆ ಮಲೆನಾಡಿಗರ ಪಾಲಿಗೆ ಕರಾಳವಾಗಿರಲಿದೆ ಎಂಬ ಆತಂಕ ನಿಜವಾಗಲಾರಂಭಿಸಿದೆ. ಬೇಸಿಗೆಯ ಪ್ರಾರಂಭದಲ್ಲಿಯೇ ಜಿಲ್ಲೆಯಾದ್ಯಂತ ಕೆಂಡದಂತಹ ಬಿಸಿಲು ಬೀಳಲಾರಂಭಿಸಿದೆ. ಮತ್ತೊಂದೆಡೆ ಕುಡಿಯುವ ನೀರಿನ ಅಭಾವ ಕೂಡ ತಲೆದೋರಲಾರಂಭಿಸಿದ್ದು, ಹಲವೆಡೆ ಜೀವಜಲಕ್ಕೆ ತೀವ್ರ ಸ್ವರೂಪದ ಹಾಹಾಕಾರ ಸೃಷ್ಟಿಯಾಗಿದೆ.
ಶಿವಮೊಗ್ಗ ತಾಲೂಕಿನಲ್ಲಿ ಭಾರೀ ಪ್ರಮಾಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಳ್ಳಲಾರಂಭಿಸಿದೆ. ಕೆಲ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ದಿನ ಕಳೆದಂತೆ ಕುಡಿಯುವ ನೀರಿನ ಸಮಸ್ಯೆ ಉಲ್ಬ್ಭಣವಾಗಲಾರಂಭಿಸಿದೆ. ಇದು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ನಿದ್ದೆಗೆಡುವಂತೆ ಮಾಡಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಎಸ್.ಎಂ.ಹರೀಶ್‌ರವರು, ಶುಕ್ರವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿದರು. ಇಲ್ಲಿಯವರೆಗೆ ಶಿವಮೊಗ್ಗ ತಾಲೂಕಿನ ಸುಮಾರು 30 ಗ್ರಾಮಗಳಲ್ಲಿ ತೀವ್ರ ಸ್ವರೂಪದ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿದೆ.
ಇದರಲ್ಲಿ ಗೆಜ್ಜೇನಹಳ್ಳಿ ಹಾಗೂ ಮುದ್ದಿನಕೊಪ್ಪಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಎರಡು ಗ್ರಾಮಗಳಲ್ಲಿ ಹೊಸದಾಗಿ ಬೋರ್‌ವೆಲ್‌ಗಳನ್ನು ಕೊರೆಯಿಸಿ ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗಿದ್ದು, ಆದಷ್ಟು ಶೀಘ್ರ ಸಮಸ್ಯೆ ಪರಿಹಾರವಾಗಲಿದೆ. ಉಳಿದಂತೆ ಯಡವಾಲ, ಆಲದಹಳ್ಳಿ, ಬೆನವಳ್ಳಿ ಮತ್ತೆ ಕೆಲ ಗ್ರಾಮಗಳಲ್ಲಿ ಹೊಸದಾಗಿ ಬೋರ್‌ವೆಲ್ ಕೊರೆಯಿಸುವುದು ಸೇರಿದಂತೆ ಇತರ ಜಲಮೂಲಗಳಿಂದ ನೀರು ಪೂರೈಕೆ ಮಾಡಲಾಗುತ್ತಿದೆ.
ಬೀರನಕೆರೆ, ಯಡವಾಲ, ಬಿಕೋನಹಳ್ಳಿ, ಆಯನೂರು ಸಮೀಪದ ಚಾಮುಂಡಿಪುರ, ರಾಮನಗರ, ಮೇಲಿನಕೋ
ೆಹಳ್ಳಿ, ಮಂಡಘಟ್ಟ, ಇಟ್ಟಿಗೆಹಳ್ಳಿ ಮೊದಲಾದ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯ ತೀವ್ರ ಸ್ವರೂಪದಲ್ಲಿದೆ. ಈ ಎಲ್ಲ ಗ್ರಾಮಗಳಲ್ಲಿ ಸಮಸ್ಯೆ ಪರಿಹಾರಕ್ಕೆ ಮುಂದಾಗಲಾಗಿದೆ. ಅಗತ್ಯವಾದರೆ ಟ್ಯಾಂಕರ್ ಮೂಲಕವೂ ನೀರು ಪೂರೈಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಉದ್ಭವ: ಮಳೆ ಕೊರತೆಯಿಂದ ಕೆರೆಕಟ್ಟೆಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗಿಲ್ಲ. ಈಗಾಗಲೇ ಹಲವು ಕೆರೆಕಟ್ಟೆ, ಬಾವಿಗಳು ನೀರಿಲ್ಲದೆ ಬರಿದಾಗಿವೆ.
ಮತ್ತೊಂದೆಡೆ ಬಿಸಿಲಿನ ಪ್ರಮಾಣ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದೆ. ಇದರಿಂದ ಅಂತರ್ಜಲದ ಪ್ರಮಾಣದಲ್ಲಿ ತೀವ್ರ ಕುಸಿತ ಉಂಟಾಗುತ್ತಿದೆ. ಏಕಾಏಕಿ ಬೋರ್‌ವೆಲ್‌ಗಳು ಕೈಕೊಡಲಾರಂಭಿಸಿವೆ. ಇದನ್ನೇ ನಂಬಿಕೊಂಡಿರುವ ಗ್ರಾಮಸ್ಥರು ತೊಂದರೆಗೊಳಗಾಗುವಂತಾಗಿದೆ. ಯಾವ ಗ್ರಾಮದಲ್ಲಿ ಬೋರ್‌ವೆಲ್‌ಗಳು ಯಾವಾಗ ಕೈಕೊಡುತ್ತವೆ ಎಂಬುವುದೇ ಗೊತ್ತಾಗುತ್ತಿಲ್ಲವಾಗಿದೆ. ಆ ಮಟ್ಟಕ್ಕೆ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಇದರಿಂದ ಕುಡಿಯುವ ನೀರಿನ ಹಾಹಾಕಾರ ತೀವ್ರವಾಗಲು ಮುಖ್ಯ ಕಾರಣವಾಗಿದೆ. ಬೇಸಿಗೆಯ ಅವಧಿಯಲ್ಲಿ ಮಳೆಯಾದರೆ ಪರಿಸ್ಥಿತಿ ಸುಧಾರಿಸಲಿದೆ. ಇಲ್ಲದಿದ್ದರೆ ಗಂಭೀರ ಸ್ಥಿತಿಗೆ ಅಂತರ್ಜಲ ಮಟ್ಟ ತಲುಪುವ ಆತಂಕವೂ ಇದೆ.
ಆದರೆ, ಕುಡಿಯುವ ನೀರಿಗೆ ಸಂಬಂಧಿಸಿದಂತೆ ಎದುರಾಗುವ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಪರಿಹರಿಸಲು ಆಡಳಿತ ವ್ಯವಸ್ಥೆ ಸರ್ವಸನ್ನದ್ಧವಾಗಿದೆ. ಸಮರೋಪಾದಿಯಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ.
ಈಗಾಗಲೇ ಸ್ಥಳೀಯಾಡಳಿತ ಹಾಗೂ ತಮ್ಮ ವ್ಯಾಪ್ತಿಯ ಇಲಾಖೆಯ ಅಧಿಕಾರಿ-ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ವಿಳಂಬಕ್ಕೆ ಆಸ್ಪದವಾಗದಂತೆ ಕಾರ್ಯನಿರ್ವಹಣೆ ಮಾಡುವಂತೆ ನಿರ್ದೇಶನ ನೀಡಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಎಸ್.ಎಂ.ಹರೀಶ್ ಮಾಹಿತಿ ನೀಡಿದ್ದಾರೆ.
‘40 ಕೋಟಿ ರೂ.ಗೆ ಪ್ರಸ್ತಾವನೆ ಸಲ್ಲಿಕೆ’
ಶಿವಮೊಗ್ಗ ಜಿಲ್ಲೆಯಾದ್ಯಂತ ಅಂತರ್ಜಲದ ಪ್ರಮಾಣ ತೀವ್ರವಾಗಿ ಕುಸಿಯುತ್ತಿದೆ. ಬೋರ್‌ವೆಲ್‌ಗಳು ಕೈಕೊಡಲಾರಂಭಿಸಿವೆ. ಇದರಿಂದ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವಂತಾಗಿದ್ದು, ಕೆಲವೆಡೆ ಸಮಸ್ಯೆ ತೀವ್ರ ಸ್ವರೂಪದಲ್ಲಿದೆ. ಇಂತಹ ಕಡೆ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗಿದೆ. ಕಾಲಮಿತಿಯಲ್ಲಿ ಸಮಸ್ಯೆ ಪರಿಹಾರ ಮಾಡಲಾಗುತ್ತಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಡಾ. ಕೆ. ರಾಕೇಶ್‌ಕುಮಾರ್ ತಿಳಿಸಿದ್ದಾರೆ. ಶುಕ್ರವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಜಿಲ್ಲೆಯಲ್ಲಿ 1,354 ಗ್ರಾಮಗಲ್ಲಿ ಈ ಕುರಿತು ಸಮಿತಿಗಳನ್ನು ರಚಿಸಿ, ನಿಯಮಾನುಸಾರ ಸದಸ್ಯರ ನೇಮಕ ಮಾಡಲಾಗಿದೆ. ಈ ಸಮಿತಿಯ ಸದಸ್ಯರ ಅಭಿಪ್ರಾಯ ಹಾಗೂ ಸ್ಥಳೀಯವಾಗಿ ಕಂಡುಬರುವ ಸಮಸ್ಯೆಗಳನ್ನು ಗುರುತಿಸಿ 1,634 ಕುಡಿಯುವ ನೀರಿಗೆ ಸಂಬಂಧಿಸಿದ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಇದಕ್ಕೆ ಅಗತ್ಯವಾದ 40 ಕೋಟಿ ರೂ. ಅನುದಾನವನ್ನು ಕಾಂಟಿಜೆನ್ಸಿ ಆ್ಯಕ್ಷನ್ ಪ್ಲ್ಯಾನ್ ಅಡಿ ಬಿಡುಗಡೆ ಮಾಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಬೇಸಿಗೆಯ ಅವಧಿಯಲ್ಲಿ ಮಳೆಯಾದರೆ ಪರಿಸ್ಥಿತಿಯಲ್ಲಿ ಕೊಂಚ ನಿಯಂತ್ರಣಕ್ಕೆ ಬರಲಿದೆ. ಒಂದು ವೇಳೆ ಇದೇ ಸ್ಥಿತಿ ಮುಂದುವರಿದರೆ ಮಾರ್ಚ್, ಎಪ್ರಿಲ್, ಮೇ ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಿಸುವ ಸಾಧ್ಯಯಿದೆ. ಎದುರಾಗುವ ಸಮಸ್ಯೆಯ ಪರಿಹಾರಕ್ಕೆ ಎಲ್ಲ ರೀತಿಯ ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಇದೇ ಸಂದರ್ಭದಲ್ಲಿ ಡಾ. ಕೆ. ರಾಕೇಶ್‌ಕುಮಾರ್ ಮಾಹಿತಿ ನೀಡಿದ್ದಾರೆ.
‘ಕೈಕೊಡುತ್ತಿರುವ ಬೋರ್‌ವೆಲ್‌ಗಳು’
ಜಲ್ಲೆಯಾದ್ಯಂತ ಅಂತರ್ಜಲದ ಮಟ್ಟ ಕುಸಿಯುತ್ತಿದೆ. ಇದರಿಂದ ಬೋರ್‌ವೆಲ್‌ಗಳು ಕೈಕೊಡುತ್ತಿವೆ. ಕುಡಿಯುವ ನೀರಿಗೆ ಬೋರ್‌ವೆಲ್ ಅವಲಂಬಿತ ಗ್ರಾಮಗಳಲ್ಲಿ ಸಮಸ್ಯೆ ಬಿಗಡಾಯಿಸುತ್ತಿದೆ. ಸಮಸ್ಯೆ ಕಂಡುಬರುವ ಗ್ರಾಮಗಳಲ್ಲಿ ಹೊಸದಾಗಿ ಬೋರ್‌ವೆಲ್ ಕೊರೆಯುವುದು ಸೇರಿದಂತೆ ಇತರ ಜಲಮೂಲಗಳಿಂದ ನೀರು ಪೂರೈಕೆ ಮಾಡುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ಹಗಲು-ರಾತ್ರಿಗಳ ಪರಿವೆಯೇ ಇಲ್ಲದೆ ಸಮರೋಪಾದಿಯಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ುಪಾಲಕ ಅಭಿಯಂತರ ಎಸ್.ಎಂ.ಹರೀಶ್ ತಿಳಿಸಿದ್ದಾರೆ. ಜಿಲ್ಲೆಯ ಬರ ಪೀಡಿತ ಆರು ತಾಲೂಕುಗಳಿಗೆ ಪ್ರಾಕೃತಿಕ ಕೋಪ ನಿಧಿಯಡಿ ತಲಾ 40 ಲಕ್ಷ ರೂ. ಬಿಡುಗಡೆಯಾಗಿದೆ. ಪ್ರತೀ ತಾಲೂಕಿಗೆ ಕ್ರಿಯಾಯೋಜನೆ ರೂಪಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ.
ಈಗಾಗಲೇ ಮುಂದಿನ ತಿಂಗಳುಗಳಲ್ಲಿ ಸಮಸ್ಯೆ ಉದ್ಭವವಾಗುವ ಗ್ರಾಮಗಳ ಪಟ್ಟಿ ಹಾಗೂ ಕೈಗೆತ್ತಿಕೊಳ್ಳಬೇಕಾದ ಕಾಮಗಾರಿಗಳ ವರದಿಗಳನ್ನು ಸಿದ್ಧಪಡಿಸಲಾಗಿದೆ ಎಂದು ಎಸ್.ಎಂ.ಹರೀಶ್ ಮಾಹಿತಿ ನೀಡಿದರು.







