ಕಾರವಾರ: ಬಾಲಕ, ಪಾಲಕ, ಶಿಕ್ಷಕರ ಸ್ನೇಹ ಸಂಜೆ ಕಾರ್ಯಕ್ರಮ

ಕಾರವಾರ,ಫೆ.10: ಕನ್ನಡ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಪಾಲಕರನ್ನು ವ್ಯಂಗ್ಯ ಮಾಡುವ ಸಾಮಾಜಿಕ ಪಿಡುಗು ಇಂದು ಸಮಾಜಕ್ಕೆ ಅಂಟಿಕೊಂಡಿದ್ದು, ಇದನ್ನು ನಿರ್ಮೂಲನೆ ಮಾಡಲು ಯುವಜನತೆ ಶ್ರಮಿಸಬೇಕಿದೆ ಎಂದು ಕಸಾಪ ನಿಕಟಪೂರ್ವಅಧ್ಯಕ್ಷ ರಾಮಾ ನಾಯ್ಕ ಕರೆ ನೀಡಿದರು. ನಗರದ ಪೊಲೀಸ್ ಹೆಡ್‌ಕ್ವಾರ್ಟರ್ಸ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಬಾಲಕ, ಪಾಲಕ ಹಾಗೂ ಶಿಕ್ಷಕರ ಸ್ನೇಹ ಸಂಜೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಮಾತೃ ಭಾಷೆಯಲ್ಲಿ ಶಿಕ್ಷಣ ಪಡೆಯುವವರಲ್ಲಿ ಸೃಜನಶೀಲತೆಯ ಬೆಳವಣಿಗೆ ಅಧಿಕವಾಗಿದೆೆ ಎನ್ನುವುದು ಅಧ್ಯಯನಗಳಿಂದ ಸಾಬೀತಾಗಿದೆ. ಕನ್ನಡ ಮಾಧ್ಯಮ ಶಾಲೆಗಳು ಎಂದು ನಿರ್ಲಕ್ಷ ತೋರುವುದನ್ನು ನಿಲ್ಲಿಸಬೇಕು ಎಂದರು.
ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಆರ್.ಪಿ.ಐ. ಸಚಿನ್ ಲಾರೆನ್ಸ್ ಮಾತನಾಡಿ, ಕೀಳರಿಮೆ ತ್ಯಜಿಸಿ ವಿದ್ಯಾರ್ಥಿಗಳು ತಮ್ಮ ಸ್ವಸಾಮರ್ಥ್ಯದ ಮೇಲೆ ನಂಬಿಕೆಯಿಟ್ಟು ಮುಂದುವರಿಯಬೇಕು ಎಂದರು.
ಸ್ನೇಹ ಸಂಜೆ ಕಾರ್ಯಕ್ರಮದ ನಿಮಿತ್ತ ವಿದ್ಯಾರ್ಥಿಗಳ ಪಾಲಕರಿಗೆ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಾದ ಪಾಲಕರಿಗೆ ಹಾಗೂ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಶಾಲೆಯ ದಿನನಿತ್ಯದ ವಿವಿಧ ಚಟುವಟಿಕೆಗಳಿಗೆ ಸಹಕರಿಸುತ್ತಿರುವ ಪ್ರಮುಖರನ್ನು ಗೌರವಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ನೃತ್ಯ, ದೇಶಭಕ್ತಿಗೀತೆ, ಕವ್ವಾಲಿ, ಕೋಲಾಟ ಮುಂತಾದ ಮನರಂಜನಾ ಕಾರ್ಯಕ್ರಮಗಳು ನಡೆದವು. ವಿಶೇಷವಾಗಿ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಹಾಗೂ ಗಣ್ಯ ವ್ಯಕ್ತಿಗಳು ಸೇರಿ ಬೆಳದಿಂಗಳ ಊಟವನ್ನು ಸವಿದು ಕಾರ್ಯಕ್ರಮದ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಕಾಂತ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸರಕಾರಿ ಪದವಿ ಕಾಲೇಜಿನ ಉಪನ್ಯಾಸಕಿ ಪ್ರೊ ಶಾರದಾ ಭಟ್, ತಾಲೂಕು ದೈಹಿಕ ಪರಿವೀಕ್ಷಕ ಆರ್.ಎಚ್.ನಾಯ್ಕ, ಬಿ.ಆರ್.ಸಿ. ಉಮೇಶ ನಾಯ್ಕ, ಅಲ್ತಾಫ್ ಶೇಖ್, ನಾರಾಯಣ ದೇವಳಿ, ಧಾರವಾಡಕರ್, ಸಿ.ಆರ್.ಪಿ.ಸವಿತಾ ನಾಯ್ಕ, ಅಮಿತ್‌ಕಾಮತ್, ಎಸ್.ಡಿ.ಎಂ.ಸಿ.ಅಧ್ಯಕ್ಷೆ ಸುವರ್ಣಾ ಬಂಟನೂರು ವಿದ್ಯಾರ್ಥಿಗಳ ಪಾಲಕರು, ಸಾರ್ವಜನಿಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.







