ಸಂತ ಆ್ಯಗ್ನೆಸ್ ಕಾಲೇಜಿಗೆ ಯುಜಿಸಿಯಿಂದ ‘ಕಾಲೇಜ್ ಆಫ್ ಎಕ್ಸಲೆನ್ಸ್ ’ಮಾನ್ಯತೆ
# ಕಾಲೇಜ್ ಆಫ್ ಎಕ್ಸಲೆನ್ಸ್ ಮಾನ್ಯತೆ ಪಡೆದ ದೇಶದ 18ನೆ, ರಾಜ್ಯದ 3ನೆ ಮತ್ತು ಮಂಗಳೂರು ವಿವಿಯ ಪ್ರಥಮ ಕಾಲೇಜು

ಮಂಗಳೂರು, ಫೆ.10: ನಗರದ 96 ವರ್ಷಗಳ ಇತಿಹಾಸವನ್ನು ಹೊಂದಿರುವ ಸಂತ ಆ್ಯಗ್ನೆಸ್ ಕಾಲೇಜು (ಸ್ವಾಯತ್ತ) ವಿಶ್ವವಿದ್ಯಾನಿಲಯ ಅನುದಾನ ಆಯೋಗದಿಂದ 'ಕಾಲೇಜ್ ಆಫ್ ಎಕ್ಸಲೆನ್ಸ್' ಮಾನ್ಯತೆಯನ್ನು ಫೆ.2017ರಂದು ಪಡೆದುಕೊಂಡಿದೆ. ಈ ರೀತಿಯ ಮಾನ್ಯತೆಯನ್ನು ಪಡೆದುಕೊಂಡ ದೇಶದ 18ನೆ ಕಾಲೇಜು ಹಾಗೂ ರಾಜ್ಯದ ಮೂರನೆ ಕಾಲೇಜು ಮತ್ತು ಮಂಗಳೂರು ವಿಶ್ವ ವಿದ್ಯಾನಿಲಯದ ಪ್ರಥಮ ಕಾಲೇಜು ಇದಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಸಿಸ್ಟರ್.ಡಾ.ಎಂ.ಜಸ್ವಿನಾ ಎ.ಸಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಾಲೇಜು 1999ರಲ್ಲಿ ನ್ಯಾಕ್ ಸಂಸ್ಥೆಯಿಂದ ಫೈವ್ ಸ್ಟಾರ್ ಸ್ಟೇಟಸ್ ಹಾಗೂ 2005ರಲ್ಲಿ ಎ ಗ್ರೇಡ್ ಮಾನ್ಯತೆ ಗಳಿಸಿತ್ತು.2012ರಲ್ಲಿ ಮೊದಲ ಬಾರಿಗೆ ಸಿಜಿಪಿಎ 3.53 ಗರಿಷ್ಠಾಂಕಗಳೊಂದಿಗೆ ಎ ಗ್ರೆಡ್ ಮಾನ್ಯತೆ ಪಡೆದುಕೊಂಡಿತ್ತು.2006ರಲ್ಲಿ ಕಾಲೇಜ್ ವಿದ್ ಪೊಟೆನ್ಯಿಯಲ್ ಎಕ್ಸಲೆನ್ಸ್ ಮಾನ್ಯತೆಯನ್ನು ವಿಶ್ವ ವಿದ್ಯಾನಿಲಯ ಅನುದಾನ ಆಯೋಗದಿಂದ ಪಡೆದುಕೊಂಡಿದೆ.2007ರಲ್ಲಿ ಕರ್ನಾಟಕ ಸರಕಾರದಿಂದ ಶೈಕ್ಷಣಿಕ ಸ್ವಾಯತ್ತತೆಯನ್ನು ಪಡೆದುಕೊಂಡಿತ್ತು ಎಂದು ಸಿಸ್ಟರ್ ಜಸ್ವಿನಾ ತಿಳಿಸಿದ್ದಾರೆ.
1914ರಲ್ಲಿ ಸೈಂಟ್ ಆ್ಯಗ್ನೆಸ್ ಕಾನ್ವೆಂಟ್ ಆರಂಭವಾಗಿತ್ತು. ದಕ್ಷಿಣ ಭಾರತದಲ್ಲಿ ಮಹಿಳಾ ಉನ್ನತ ಶಿಕ್ಷಣ ಹೆಸರಾಗಿರುವ ಸಂತ ಆಗ್ನೆಸ್ ಕಾಲೇಜು 1921ರಲ್ಲಿ ಅಪೋಸ್ತೋಲಕ್ ಕಾರ್ಮೆಲ್ ಭಗಿನಿ,ಮದರ್ ಅಲೊಶಿಯಸ್‌ರವರ ನೇತೃತ್ವದಲ್ಲಿ ಪ್ರಾರಂಭಗೊಂಡು 96ವರ್ಷಗಳ ಇತಿಹಾಸದಲ್ಲಿ ಎಲ್ಲಾ ಜಾತಿ ಮತ್ತು ಪಂಗಗಳ ವಿದ್ಯಾರ್ಥಿನಿಯರಿಗೆ ಶಿಕ್ಷಣ ನೀಡುತ್ತಾ ಬಂದಿದೆ. ಪ್ರಸಕ್ತ ಆ್ಯಗ್ನೆಸ್ ಸಂಶೋಧನಾ ಕೇಂದ್ರ, ಸಮುದಾಯ ಕೇಂದ್ರ, ಮಹಿಳಾ ಕೇಂದ್ರ ಮತ್ತು ಶೈಕ್ಷಣಿಕ ಕೇಂದ್ರವನ್ನು ಹೊಂದಿದೆ ಎಂದು ಸಿಸ್ಟರ್ ಜಸ್ವಿನಾ ತಿಳಿಸಿದ್ದಾರೆ.
ಸುದ್ದಿಗೊಷ್ಠಿಯಲ್ಲಿ ಉಪ ಪ್ರಾಂಶುಪಾಲೆ ಸಿ.ಡಿ.ಎಂ.ವೆನಿಸ್ಸಾ, ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ.ನೊಯೆಲಿನ್ ಜೆ.ಪಿಂಟೋ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ.ದೇವಿಪ್ರಭಾ ಆಳ್ವಾ ಹಾಗೂ ಪರೀಕ್ಷಾ ವಿಭಾಗದ ಕಂಟ್ರೋಲರ್ ಚಾರ್ಲ್ಸ್ ಎಸ್ ಫಾಯಸ್ ಮೊದಲಾದವರು ಉಪಸ್ಥಿತರಿದ್ದರು.







