ಮರಳು ಸಮಸ್ಯೆ: ಅಧಿಕಾರಿಗಳ ಭರವಸೆ
ಅಮರಣಾಂತರ ಉಪವಾಸ ಸತ್ಯಾಗ್ರಹ ಅಂತ್ಯ

ಉಡುಪಿ, ಫೆ.10: ಉಡುಪಿ ಜಿಲ್ಲೆಯಲ್ಲಿನ ಮರಳು ಸಮಸ್ಯೆಗೆ ಪರಿಹಾರ, ಕಾರ್ಮಿಕರ ಹಿತ ರಕ್ಷಣೆ ಮತ್ತು ಮೂಲಭೂತ ಹಕ್ಕುಗಳಿಗೆ ಆಗ್ರಹಿಸಿ ಕರ್ನಾಟಕ ಕಾರ್ಮಿಕರ ವೇದಿಕೆಯ ನೇತೃತ್ವದಲ್ಲಿ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಎದುರು ಮೂರು ದಿನಗಳಿಂದ ನಡೆಸುತಿದ್ದ ಅಮರಣಾಂತರ ಉಪವಾಸ ಸತ್ಯಾಗ್ರಹ ಅಧಿಕಾರಿಗಳ ಭರವಸೆಯ ಹಿನ್ನೆಲೆ ಯಲ್ಲಿ ಇಂದು ಅಂತ್ಯಗೊಂಡಿತು.
ಮೂರನೆ ದಿನವಾದ ಇಂದು ವೇದಿಕೆಯ ಜಿಲ್ಲಾಧ್ಯಕ್ಷ ರವಿ ಶೆಟ್ಟಿ ಸೇರಿದಂತೆ ಹಲವು ಮಂದಿ ತಮ್ಮ ಉಪವಾಸ ಸತ್ಯಾಗ್ರಹವನ್ನು ಮುಂದುವರೆಸಿದ್ದರು. ಈ ವೇಳೆ ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್ ನೇತೃತ್ವದಲ್ಲಿ ಕಾರ್ಯಕರ್ತರು ಬಿಸಿಲಲ್ಲೇ ಮಲಗಿ ಘೋಷಣೆಗಳನ್ನು ಕೂಗಿದರು. ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಿ ಭರವಸೆ ನೀಡುವವರೆಗೆ ಧರಣಿ ಕೈಬಿಡಲ್ಲ. ನಾವು ಸತ್ತರು ಇಲ್ಲಿಂದ ತೊಲಗುವುದಿಲ್ಲ ಎಂದು ಅವರು ಕಿಡಿಕಾರಿದರು.
ಬೆಳಗ್ಗೆಯಿಂದ ಸಂಜೆಯವರೆಗೆ ಬಿಸಿಲಲ್ಲೆ ಮಲಗಿ ಧರಣಿ ನಡೆಸಿದ ಪರಿ ಣಾಮ ಕರವೇ ಮುಖಂಡರಾದ ಸುಧೀರ್ ಪೂಜಾರಿ ಹಾಗೂ ಆರೀಫ್ ಅಸ್ವಸ್ಥಗೊಂಡಿದ್ದು, ಇವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಈ ಹಿನ್ನೆಲೆಯಲ್ಲಿ ಸಂಜೆ ವೇಳೆ ಉಡುಪಿ ತಹಶೀಲ್ದಾರ್ ಮಹೇಶ್ಚಂದ್ರ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಕೋದಂಡ ರಾಮಯ್ಯ ಸ್ಥಳಕ್ಕೆ ಆಗಮಿಸಿದರು.
ಬಳಿಕ ಧರಣಿನಿರತರಿಂದ ಮನವಿ ಸ್ವೀಕರಿಸಿದ ಅಧಿಕಾರಿಗಳು, ಇನ್ನು ಮುಂದೆ ಅಕ್ರಮವಾಗಿ ಮರಳು ಸಾಗಿಸುವ ಲಾರಿಗಳನ್ನು ಹಿಡಿದು ದಂಡ ವಿಧಿಸುವ ಬದಲು ಸಾಗಾಟಕ್ಕೆ ಕಾರಣರಾದವರಿಗೆ ದಂಡ ವಿಧಿಸಿ ಕ್ರಮತೆಗೆದು ಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಇದಕ್ಕೆ ಒಪ್ಪಿದ ಧರಣಿ ನಿರತರು ಅಧಿಕಾರಿಗಳು ನೀಡಿದ ಹಣ್ಣಿನ ರಸವನ್ನು ಕುಡಿದು ಉಪನ್ಯಾಸ ಅಂತ್ಯಗೊಳಿಸಿದರು.
ಈ ಸಂದರ್ಭದಲ್ಲಿ ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ಮರಳಿಗಾಗಿ ಹೋರಾಟ ಸಮಿತಿಯ ಸಂಚಾಲಕ ನಾಗೇಂದ್ರ, ವೇದಿಕೆ ಮುಖಂಡರಾದ ರೋಹಿತ್ ಕರಂಬಳ್ಳಿ, ಸಂದೀಪ್, ಸುಧಾಕರ್ ನಾಯಕ್, ಚಂದ್ರ ಪೂಜಾರಿ, ನಿವೇಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.







