ಜಾಲಿ ಎಲ್ ಎಲ್ ಬಿ 2 - ವಿಮರ್ಶೆ
ಇಟ್ಸ್ ಎ ಜಾಲಿ ಗುಡ್ ಫಿಲ್ಮ್ !

ಜಾಲಿ ಎಲ್‌ಎಲ್‌ಬಿ ಸರಣಿಯ ಎರಡನೇ ಚಿತ್ರ ಜಾಲಿ ಎಲ್‌ಎಲ್‌ಬಿ-2 ತೆರೆ ಕಂಡಿದೆ. ಅಕ್ಷಯ ಕುಮಾರ್, ಹ್ಯೂಮಾ ಖುರೇಷಿ, ಸೌರಭ್ ಶುಕ್ಲಾ, ಅನ್ನು ಕಪೂರ್ ತಾರಾಗಣದ ಚಿತ್ರವನ್ನು ಸುಭಾಷ್ ಕಪೂರ್ ನಿರ್ದೇಶಿಸಿದ್ದು, ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ. ಸರಣಿಯ ಮೊದಲ ಚಿತ್ರಕ್ಕಿಂತಲೂ ಉತ್ತಮ ಗುಣಮಟ್ಟದ ಈ ಚಿತ್ರ, ಕುತೂಹಲ ಕೆರಳಿಸುವ ಕಥಾನಕ ಹಾಗೂ ತಾರಾಶಕ್ತಿಯನ್ನು ಸಮರ್ಥವಾಗಿ ಬಳಸಿಕೊಂಡಿದೆ.
ಉತ್ತಮ ಹಾಗೂ ತರ್ಕಯುತವಾದ ಸಮಯ ಹಾಗೂ ಸ್ಥಳ- ಲಯಗಳನ್ನು ಹೊಂದಿದ ಈ ಅಪರೂಪದ ಚಿತ್ರ, ಚಲನಚಿತ್ರ ವೀಕ್ಷಣೆಯ ಉಲ್ಲಾಸವನ್ನು ಮತ್ತೆ ಪ್ರೇಕ್ಷಕರಿಗೆ ಕಟ್ಟಿಕೊಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಬಾಲಿವುಡ್ ಚಿತ್ರದಿಂದ ಮರೆಯಾಗುತ್ತಿರುವ ವಿಶ್ವಾಸವನ್ನು ಮರಳಿಸುವಲ್ಲಿ ಯಶಸ್ವಿಯಾಗಿದೆ. ಕೆಲ ಸಣ್ಣ ಪುಟ್ಟ ಇತಿಮಿತಿಗಳಿದ್ದರೂ, ಅಕ್ಷಯ್ ಕುಮಾರ್ ಅವರ ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿದೆ.
ಮೊದಲ ಫ್ರೇಮ್‌ನಿಂದಲೂ ಚಿತ್ರ ಪ್ರೇಕ್ಷಕರನ್ನು ತೊಡಗಿಸಿಕೊಳ್ಳುತ್ತದೆ. ಅದು ಹೇಗೆ ಕೊನೆಗೊಳ್ಳುತ್ತದೆ ಎನ್ನುವುದನ್ನು ನೀವು ಕಲ್ಪಿಸಿಕೊಳ್ಳುವಂತಿದ್ದರೂ, ಆ ಕುತೂಹಲವನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಕಾನ್ಪುರ್‌ವಾಲೆ ಜಗದೀಶ್ವರ್ ಮಿಶ್ರಾ ಅಕಾ ಜಾಲಿ (ಅಕ್ಷಯ್ ಕುಮಾರ್) ಈಗ ಲಕ್ನೋ ನಿವಾಸಿ ಹಾಗೂ ಯುವವಕೀಲ. ಅಂದರೆ ತಡೆಯನ್ನು ಮೀರಲು ಸಾಕಾಗುವಷ್ಟೇ ಚಟುವಟಿಕೆಯ ಯುವ ವಕೀಲ. ಆದರೆ ಹಂತ ಹಂತವಾಗಿ ಈ ಯುವ ವಕೀಲ ಸತ್ಯದ ಹಾದಿಯನ್ನು ತೋರಿಸುತ್ತಾನೆ. ಕೆಟ್ಟವರಿಗೆ ಚಾಟಿಯೇಟು ನೀಡುತ್ತಾನೆ. ಆದರೆ ಡಿಶುಂ ಡಿಶುಂ ಮೂಲಕ ಅಲ್ಲ. ವರ್ಣರಂಜಿತ ಮಾತಿನ ಚಿತ್ತಾರದ ಮೂಲಕ. ಸಹನಟರ ನಟನೆಯೂ ಮನೋಜ್ಞವಾಗಿದೆ.





