ಇಂಜಿನಿಯರಿಂಗ್ ಕಾಲೇಜು ಸೇರ್ಪಡೆಗೆ ಏಕೈಕ ಪ್ರವೇಶ ಪರೀಕ್ಷೆ: ಮುಂದಿನ ವರ್ಷದಿಂದ ಜಾರಿ
ಹೊಸದಿಲ್ಲಿ, ಫೆ.10: ಮುಂದಿನ ವರ್ಷದಿಂದ ಇಂಜಿನಿಯರಿಂಗ್ ಮತ್ತು ವಾಸ್ತುಶಿಲ್ಪ ಕೋರ್ಸ್‌ಗೆ ಪ್ರವೇಶ ಪಡೆಯಲು ಒಂದೇ ಪ್ರವೇಶ ಪರೀಕ್ಷೆ ನಡೆಸಲಾಗುವುದು ಎಂದು ಸರಕಾರ ತಿಳಿಸಿದೆ. ಇದರೊಂದಿಗೆ ಕೇಂದ್ರದ ಮಂಡಳಿ, ರಾಜ್ಯ ಸರಕಾರ ಹಾಗೂ ಖಾಸಗಿ ಸಂಸ್ಥೆಗಳು ನಡೆಸುತ್ತಿದ್ದ ಪ್ರತ್ಯೇಕ ಪ್ರವೇಶ ಪರೀಕ್ಷೆಗಳು ರದ್ದಾಗಲಿವೆ.
ಈ ಪರೀಕ್ಷೆ 2016ರಿಂದ ಆರಂಭಿಸಲಾದ ‘ನೀಟ್’ (ನ್ಯಾಷನಲ್ ಎಲಿಜಿಬಿಲಿಟಿ-ಕಮ್-ಎಂಟ್ರೆನ್ಸ್ ಟೆಸ್ಟ್)ನ ಮಾದರಿಯಲ್ಲಿ ನಡೆಯಲಿದೆ. ಆದಾಗ್ಯೂ ಐಐಟಿಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯ ಜೊತೆಗೆ ಜೆಇಇ-ಅಡ್ವಾನ್ಸ್ಡ್ ಪರೀಕ್ಷೆಯಲ್ಲೂ ತೇರ್ಗಡೆಗೊಳ್ಳಬೇಕು. ತಾಂತ್ರಿಕ ಶಿಕ್ಷಣದ ಅಖಿಲ ಭಾರತೀಯ ಸಮಿತಿ (ಎಐಸಿಟಿಇ) ಸಲ್ಲಿಸಿದ ಪ್ರಸ್ತಾವನೆಯನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಅಂಗೀಕರಿಸಿದ್ದು ಈ ಕುರಿತು ಸೂಕ್ತ ಮಾರ್ಗದರ್ಶಿ ಸೂತ್ರ ಸಿದ್ಧಪಡಿಸುವಂತೆ ಸಮಿತಿಗೆ ತಿಳಿಸಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. ಪ್ರವೇಶ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕ ಮತ್ತು ಪ್ರಮಾಣೀಕರಿಸುವುದು ಹಾಗೂ ಭ್ರಷ್ಟಾಚಾರಮುಕ್ತ, ವಾಣಿಜ್ಯೀಕರಣಮುಕ್ತಗೊಳಿಸುವುದು ನಮ್ಮ ಉದ್ದೇಶವಾಗಿದೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ. ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯ ವೇಳೆ ಕೆಲ ಖಾಸಗಿ ಸಂಸ್ಥೆಗಳು ವಿದ್ಯಾರ್ಥಿಗಳಿಂದ ಅಧಿಕ ಶುಲ್ಕ ವಸೂಲು ಮಾಡುತ್ತಿರುವ ಬಗ್ಗೆ ಹಲವು ದೂರುಗಳು ಬಂದಿವೆ ಎಂದವರು ತಿಳಿಸಿದ್ದಾರೆ. ಸೆಂಟ್ರಲ್ ಬೋರ್ಡ್ ಫಾರ್ ಸೆಕೆಂಡರಿ ಎಜುಕೇಶನ್(ಸಿಬಿಎಸ್‌ಇ) ನಡೆಸುವ ಜೆಇಇ-ಮೈನ್ ಪರೀಕ್ಷೆಗೆ ಪ್ರತೀ ವರ್ಷ ಸುಮಾರು 1.3 ಮಿಲಿಯನ್ ವಿದ್ಯಾರ್ಥಿಗಳು ಹಾಜರಾಗುತ್ತಿದ್ದರೆ, ರಾಜ್ಯ ಸರಕಾರ ಹಾಗೂ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರತ್ಯೇಕ ಪರೀಕ್ಷೆ ನಡೆಸುತ್ತಿದ್ದವು.
ಇನ್ನು ಮುಂದೆ ಕೇವಲ ಒಂದೇ ಪ್ರವೇಶ ಪರೀಕ್ಷೆ ನಡೆಯಲಿದ್ದು ಇದು ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅವರ ಕಲ್ಪನೆಯ ಕೂಸು ಎನ್ನಲಾಗಿದೆ.





