ಪನ್ನೀರ್ ಸೆಲ್ವಂ ಸರಕಾರದ ಬಗ್ಗೆ ಆರೆಸ್ಸೆಸ್ ಸಂತೃಪ್ತಿ
ಚೆನ್ನೈ, ಫೆ.10: ಜಯಲಲಿತಾ ಆಡಳಿತಾವಧಿಯಲ್ಲಿ ಎಐಎಡಿಎಂಕೆ ಜೊತೆಗಿನ ಸಂಬಂಧದಲ್ಲಿ ಕಠಿಣ ಸ್ಥಿತಿ ಎದುರಿಸುತ್ತಿದ್ದ ಆರೆಸ್ಸೆಸ್ ಇದೀಗ ಪನ್ನೀರ್ ಸೆಲ್ವಂ ಆಡಳಿತಾವಧಿಯಲ್ಲಿ ನಿರಾಳವಾಗಿದೆ.
ಪನ್ನೀರ್ ಸೆಲ್ವಂ ಆಡಳಿತಾವಧಿಯಲ್ಲಿ ಪ್ರತಿಭಟನೆ ಹಾಗೂ ಜಾಥಾ ನಡೆಸುವುದು ಸುಲಭವಾಗಿದೆ ಎಂದು ಆರೆಸ್ಸೆಸ್ ಮಾಧ್ಯಮ ಸಂಚಾಲಕ ಎನ್.ಸಡಗೋಪನ್ ವಿವರಿಸಿದ್ದಾರೆ. ಜಯಲಲಿತಾ ಅವಧಿಯಲ್ಲಿ ಜಾಥಾ ಕೈಗೊಳ್ಳಲು ನ್ಯಾಯಾಲಯ ಅನುಮತಿ ನೀಡಿದರೂ, ಸರಕಾರ ಅದಕ್ಕೆ ತಡೆಯಾಜ್ಞೆ ತರುತ್ತಿತ್ತು. ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ. ಸೆಲ್ವಂ ಸರಕಾರದ ಬಗ್ಗೆ ನಮಗೆ ಸಂತಸವಿದೆ ಎಂದು ಹೇಳಿದ್ದಾರೆ.
ಸಂತ ರಾಮಾನುಜ, ಗುರುಗೋವಿಂದ್ ಸಿಂಗ್, ಬಿ.ಆರ್.ಅಂಬೇಡ್ಕರ್ ಹಾಗೂ ಸುಭಾಶ್ಚಂದ್ರ ಬೋಸ್ ಅವರ ಹುಟ್ಟುಹಬ್ಬದ ಅಂಗವಾಗಿ ಎಗ್ಮೋರ್‌ನಿಂದ ಚಿಂತಾದ್ರಿಪೇಟೆವರೆಗೆ ಹಮ್ಮಿಕೊಂಡಿದ್ದ 1,000 ಮಂದಿ ಸ್ವಯಂ ಸೇವಕರ ಬೃಹತ್ ಜಾಥಾ ಬಳಿಕ ಅವರು ಮಾತನಾಡಿದರು.
ಡಿಎಂಕೆ ಅಧಿಕಾರಾವಧಿಯಲ್ಲಿ ಪೊಲೀಸರು ಅನುಮತಿ ನಿರಾಕರಿಸುತ್ತಿದ್ದರು. ಕರುಣಾನಿಧಿ ಅವರನ್ನು ಭೇಟಿ ಮಾಡಿದ ಬಳಿಕವಷ್ಟೇ ಅನುಮತಿ ಸಿಗುತ್ತಿತ್ತು. ಆದರೆ ಜಯಲಲಿತಾ ಅವಧಿಯಲ್ಲಿ ಇದೂ ಕಠಿಣವಾಗಿತ್ತು ಎಂದು ಸಡಗೋಪನ್ ವಿವರಿಸಿದ್ದಾರೆ.





