ಪನ್ನೀರ್ ಸೆಲ್ವಂ ಪಾಳೆಯಕ್ಕೆ ಇನ್ನೋರ್ವ ಎಡಿಎಂಕೆ ನಾಯಕ ಸೇರ್ಪಡೆ
ಚೆನ್ನೈ,ಫೆ.10:ಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ವಿರುದ್ಧ ಬಂಡೆದ್ದಿರುವ ತಮಿಳುನಾಡಿನ ಹಂಗಾಮಿ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಪಾಳೆಯಕ್ಕೆ ಬೆಂಬಲ ಶುಕ್ರವಾರ ಇನ್ನಷ್ಟು ಹೆಚ್ಚಿದೆ. ಎಡಿಎಂಕೆ ನಾಯಕ ಇ.ಪೊನ್ನುಸ್ವಾಮಿ ಅವರು ಪನ್ನೀರ್ ಸೆಲ್ವಂ ಪಾಳೆಯಕ್ಕೆ ಸೇರಿದ್ದು, ಮುಖ್ಯಮಂತ್ರಿಯನ್ನು ಬೆಂಬಲಿಸುವಂತೆ ಪಕ್ಷದ ಶಾಸಕರನ್ನು ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿಗಳಿಗೆ ಬೆಂಬಲ ವ್ಯಕ್ತಪಡಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪೊನ್ನುಸ್ವಾಮಿ, ಪಕ್ಷದ ಮಾಜಿ ಮುಖ್ಯಸ್ಥೆ ಜಯಲಲಿತಾ ಅವರು ಮುಖ್ಯಮಂತ್ರಿ ಹುದ್ದೆಗೆ ಪನ್ನೀರ್ ಸೆಲ್ವಂ ಸೂಕ್ತ ವ್ಯಕ್ತಿಯೆಂದು ಗುರುತಿಸಿದ್ದರು ಎಂದು ಹೇಳಿದರು. ಅವರನ್ನು ಬೆಂಬಲಿಸುವಂತೆ ಪಕ್ಷದ ಶಾಸಕರಿಗೆ ಅವರು ಮನವಿ ಮಾಡಿಕೊಂಡರು.
ಮಾಜಿ ಪಿಎಂಕೆ ನಾಯಕ ಹಾಗೂ 1999-2001ರ ಅವಧಿಯಲ್ಲಿ ಕೇಂದ್ರದ ಎನ್‌ಡಿಎ ಸರಕಾರದಲ್ಲಿ ಸಹಾಯಕ ಸಚಿವರಾಗಿದ್ದ ಪೊನ್ನುಸ್ವಾಮಿ 2013ರಲ್ಲಿ ಎಡಿಎಂಕೆ ಪಕ್ಷವನ್ನು ಸೇರಿದ್ದರು.
ನಿನ್ನೆ ಎಡಿಎಂಕೆ ಅಧ್ಯಕ್ಷೀಯ ಮಂಡಳಿಯ ಅಧ್ಯಕ್ಷ ಇ.ಮಧುಸೂದನನ್ ಅವರು ಪನ್ನೀರ್ ಸೆಲ್ವಂ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು.





