ಬಿಜೆಪಿಯೊಂದಿಗೆ ಚುನಾವಣೋತ್ತರ ಮೈತ್ರಿಯಿಲ್ಲ
ಶಿವಸೇನೆ
ಮುಂಬೈ,ಫೆ.10: ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹಣಾಹಣಿ ಕಾಳಗಕ್ಕಿಳಿದಿರುವ ಶಿವ ಸೇನೆಯ ಮುಖ್ಯಸ್ಥ ಉದ್ಧವ ಠಾಕ್ರೆ ಅವರು, ಅದರೊಂದಿಗೆ ಚುನಾವಣೋತ್ತರ ಮೈತ್ರಿಯ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ಬಿಜಿಪಿಗೆ ತನ್ನ ತಪ್ಪಿನ ಅರಿವಾಗಿದೆ ಮತ್ತು ಅದು ಪುನರ್‌ಹೊಂದಾಣಿಕೆಯ ಮೇಲೆ ಕಣ್ಣಿಟ್ಟಿದೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಬಿಎಂಸಿ ಚುನಾವಣೆಯಲ್ಲಿ ಸ್ಪರ್ಧೆಯನ್ನು ಉಭಯ ಪಕ್ಷಗಳ ನಡುವಿನ ‘ಸ್ನೇಹಪರ ಪಂದ್ಯ’ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದರ ಅರ್ಥ ಅವರು ತಮ್ಮ ತಪ್ಪುಗಳನ್ನು ಅರಿತುಕೊಂಡಿದ್ದಾರೆ. ತಾವು ತಪ್ಪು ಹೆಜ್ಜೆಗಳನ್ನಿರಿಸಿದ್ದೇವೆ ಮತ್ತು ಮುಂಬಯಿಗರ ಸಿಟ್ಟಿನ ವಿರುದ್ಧ ಹೋರಾಡುವುದು ಕಷ್ಟ ಎನ್ನುವುದು ಅವರಿಗೆ ಈಗ ಅರ್ಥವಾಗಿದೆ.ಹೀಗಾಗಿ ಅವರು ನಮ್ಮ ಬಳಿಗೆ ವಾಪಸಾಗಲು ಪ್ರಯತ್ನಿಸುತ್ತಿದ್ದಾರೆ ಎಂದು ಶಿವಸೇನೆಯ ಮುಖವಾಣಿ ‘ಸಾಮನಾ’ಕ್ಕೆ ನೀಡಿದ ಸಂದರ್ಶನದಲ್ಲಿ ಠಾಕ್ರೆ ಹೇಳಿದ್ದಾರೆ. ಆದರೆ ಯಾವುದೇ ಸಂದರ್ಭದಲ್ಲಿಯೂ ಬಿಜೆಪಿಯೊಂದಿಗೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪ್ರಶ್ನೆಯೊಂದಕ್ಕೆ ಉತ್ತರವಾಗಿ ಠಾಕ್ರೆ, ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರಕಾರಕ್ಕೆ ಬೆಂಬಲವನ್ನು ಹಿಂದೆಗೆದುಕೊಳ್ಳುವ ಬಗ್ಗೆ ತಾನಿನ್ನೂ ಚಿಂತನೆ ಮಾಡಬೇಕಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಬಿಜೆಪಿಯನ್ನು ಇನ್ನಷ್ಟು ಕುಟುಕಿರುವ ‘ಸಾಮನಾ’ದ ಸಂಪಾದಕೀಯ ಲೇಖನವು ಕೇಂದ್ರವನ್ನು ಆಳಿದ ಕಾಂಗ್ರೆಸ್ ಸರಕಾರಗಳು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಹೊಗಳಿದೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ನೋಟು ಅಮಾನ್ಯದ ಗೊಂದಲವನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂದು ಟೀಕಿಸಿದೆ.







