ಭದ್ರತಾ ಪಡೆಗಳ ಗುಂಡೇಟಿನಿಂದ ನರಕ ಯಾತನೆ
ತನ್ನದಲ್ಲದ ತಪ್ಪಿಗೆ ಚಲನಾ ಶಕ್ತಿ ಕಳಕೊಂಡ ಅಮಾಯಕ ಬಾಲಕಿ
ಶ್ರೀನಗರ, ಫೆ.10: ದಕ್ಷಿಣ ಕಾಶ್ಮೀರದ ಅರ್‌ವಾನಿ ಗ್ರಾಮದ ನಿವಾಸಿಯಾಗಿರುವ ಶಮೀಮಾ ಭದ್ರತಾ ಪಡೆಗಳ ಗುಂಡೇಟಿನಿಂದ ಗಾಯಗೊಂಡು ಇದೀಗ ಲಕ್ವ ಹೊಡೆದ ಸ್ಥಿತಿಗೆ ತಲುಪಿದ್ದಾಳೆ. ಕಳೆದ ವರ್ಷದ ಜುಲೈ 9ರಂದು, ಅಂದರೆ ಉಗ್ರ ಬುರ್ಹಾನ್ ವಾನಿ ಭದ್ರತಾ ಪಡೆಗಳ ಎನ್‌ಕೌಂಟರ್‌ಗೆ ಬಲಿಯಾದ ಮರುದಿನ, ಶಮೀಮಾ ತನ್ನ 11ರ ಹರೆಯದ ಸೋದರನನ್ನು ಕರೆತರಲು ಮನೆಯಿಂದ ಹೊರಬಂದಿದ್ದಳು. ಈ ಸಂದರ್ಭ ವಾನಿ ಹತ್ಯೆಯನ್ನು ಖಂಡಿಸಿ ನಡೆದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದಿದ್ದು ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಪಡೆಯವರು ಹಾರಿಸಿದ ಗುಂಡು ಶಮೀಮಾಳಿಗೆ ಬಡಿದಿತ್ತು. ಬುಲೆಟ್ ಆಕೆಯ ಬೆನ್ನುಮೂಳೆಯನ್ನು ಛಿದ್ರಗೊಳಿಸಿ ಕರುಳನ್ನು ಕತ್ತರಿಸಿ ಹಾಕಿತ್ತು. ಸೊಂಟದ ಕೆಳಗಿನ ಭಾಗ ನಿಷ್ಕ್ರಿಯಗೊಂಡಿರುವ ಕಾರಣ ಕಳೆದ ಏಳು ತಿಂಗಳಿನಿಂದ ಶ್ರೀನಗರದ ಶಿರೀನ್‌ಬಾಗ್‌ನಲ್ಲಿರುವ ಸರಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನ್ಯೂರೊ ಸರ್ಜರಿ ವಾರ್ಡ್‌ನಲ್ಲಿ ಶಮೀಮಾ ನಿಶ್ಯಕ್ತಳಾಗಿ ಅಸಹಾಯಕ ಸ್ಥಿತಿಯಲ್ಲಿ ಮಲಗಿದ್ದಾಳೆ. ಆಕೆಯ ದೇಹಸ್ಥಿತಿ ಎಷ್ಟೊಂದು ಕ್ಷೀಣಿಸಿದೆ ಎಂದರೆ ಮುಖ ಮತ್ತು ಕೈಗಳ ಮೂಳೆಗಳು ಆಕೆಯ ಚರ್ಮದಿಂದ ಹೊರಚಾಚಿದಂತೆ ಕಾಣಿಸುತ್ತಿದೆ. ಹಲವಾರು ಶಸ್ತ್ರಚಿಕಿತ್ಸೆಗಳ ಬಳಿಕ ಆಕೆಯನ್ನು ಕಳೆದ ಅಕ್ಟೋಬರ್‌ನಲ್ಲಿ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಮಾಡಲಾಗಿತ್ತು. ಆದರೆ ಆರೋಗ್ಯಸ್ಥಿತಿ ಬಿಗಡಾಯಿಸಿದ ಕಾರಣ ಒಂದೇ ತಿಂಗಳಲ್ಲಿ ಆಕೆಯನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಬೇಕಾಯಿತು. ನಿತ್ರಾಣಳಾಗಿದ್ದು ದೇಹದ ಕೆಲವೆಡೆ ಸಹಿಸಲಾಗದ ನೋವು ಬಾಧಿಸುತ್ತಿದೆ ಎಂದು ಕಣ್ಣುಗಳನ್ನು ಮುಚ್ಚಿಕೊಂಡು, ಕ್ಷೀಣ ಧ್ವನಿಯಲ್ಲಿ ಉಸುರುತ್ತಾಳೆ ಶಮೀಮಾ. ಗಾಲಿಕುರ್ಚಿಯ ಆಸರೆಯಲ್ಲಿ ಅತ್ತಿತ್ತ ಚಲಿಸಲು ಪ್ರಯತ್ನಿಸುವ ಈಕೆಗೆ ಸೊಂಟಕ್ಕೆ ಆಧಾರವಾಗಿ ಬೆಲ್ಟ್ ಜೋಡಿಸಲಾಗಿದೆ. ಬುಲೆಟ್ ತಗಲಿ ಆಕೆಯ ಕರುಳು ಛಿದ್ರವಾಗಿದೆ. ಪಿತ್ತಜನಕಾಂಗಕ್ಕೆ ಕೂಡಾ ಹಾನಿಯಾಗಿದೆ ಎಂದು ಶ್ರೀನಗರದ ಸರಕಾರಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಕೈಸರ್ ಅಹ್ಮದ್ ತಿಳಿಸಿದ್ದಾರೆ. ಹಾನಿಗೊಳಗಾದ ಅಂಗಗಳನ್ನು ಸುಸ್ಥಿತಿಗೆ ತರಲು ಕಳೆದ ಆರು ತಿಂಗಳಿಂದ ಪ್ರಯತ್ನಿಸುತ್ತಿದ್ದೇವೆ. ಮೊದಲು ಆಕೆಯ ಬೆನ್ನುಮೂಳೆಯನ್ನು ಸರಿ ಪಡಿಸಬೇಕಿದೆ. ಬೆನ್ನುಮೂಳೆಗೆ ಆಧಾರವಾಗಿ ಕೆಲವು ಪ್ಲೇಟ್‌ಗಳನ್ನು ಜೋಡಿಸಲಾಗಿದೆ ಎಂದು ಹಿರಿಯ ವೈದ್ಯರು ತಿಳಿಸಿದ್ದಾರೆ. ಫಿಸಿಯೋಥೆರಪಿ ಸೇರಿದಂತೆ ಸುದೀರ್ಘಾವಧಿಯ ಪರಿಣಾಮಕಾರಿ ಚಿಕಿತ್ಸೆಯಿಂದ ಶಮೀಮಾಳ ಕಾಲುಗಳಿಗೆ ಶಕ್ತಿ ಬರುವ ಸಾಧ್ಯತೆಯಿದೆ ಎನ್ನುತ್ತಾರೆ ವೈದ್ಯರು. ಶಮೀಮಾಳಿಗೆ ಬಡಿದ ಗುಂಡು ಆಕೆಯ ಬೆನ್ನುಮೂಳೆಯನ್ನಷ್ಟೇ ಅಲ್ಲ, ಇಡೀ ಕುಟುಂಬದ ಜೀವನೋಪಾಯವನ್ನೇ ಛಿದ್ರಗೊಳಿಸಿದೆ. ಕಬ್ಬಿಣದ ಕೆಲಸ ನಿರ್ವಹಿಸುತ್ತಿದ್ದ ಶಮೀಮಾಳ ತಂದೆ ಅಬ್ದುಲ್ ರಶೀದ್ ಮಗಳ ಆರೈಕೆಗಾಗಿ ಆಸ್ಪತ್ರೆಯಲ್ಲಿ ಇರಬೇಕಾದ ಕಾರಣ ಕೆಲಸ ನಿರ್ವಹಿಸಲಾಗದೆ ಅಂಗಡಿಗೆ ಬೀಗ ಜಡಿಯಬೇಕಾಗಿದೆ. ಗ್ರಾಮದ ಸಹೃದಯಿಗಳ ನೆರವಿನಿಂದ ತಮ್ಮ ಕುಟುಂಬದ ಬದುಕು ಸಾಗುತ್ತಿದೆ ಎಂದು ಶಮೀಮಾಳ ಸೋದರ ಶಬೀರ್ ಅಹ್ಮದ್ ಹೇಳುತ್ತಾನೆ. ನಮ್ಮ ಅಲ್ಪಸ್ವಲ್ಪ ಉಳಿತಾಯದ ಹಣವೆಲ್ಲಾ ಖಾಲಿಯಾಗಿದೆ. ಕಳೆದ ಏಳು ತಿಂಗಳಿನಿಂದ ಅಕ್ಕನ ಚಿಕಿತ್ಸೆಯ ಕಾರಣ ಆಸ್ಪತ್ರೆಗೆ ಓಡಾಟ ನಡೆಸುತ್ತಿರುವುದರಿಂದ ಅಂಗಡಿ ಬಾಗಿಲು ತೆಗೆಯಲೂ ಆಗುತ್ತಿಲ್ಲ ಎನ್ನುತ್ತಾನೆ ಶಬೀರ್.
ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳ ವಿರುದ್ದದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಪೆಲೆಟ್ ಗನ್ ಬಳಸುತ್ತಿರುವುದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಹಲವಾರು ಅಮಾಯಕ ಜನರ ಸಾವು-ನೋವಿಗೆ ಕಾರಣವಾಗಿರುವ ಪೆಲೆಟ್ ಗನ್ ಬಳಕೆಯನ್ನು ನಿಷೇಧಿಸಬೇಕೆಂಬ ವಿಪಕ್ಷಗಳ ಆಗ್ರಹಕ್ಕೆ ಸರಕಾರ ನಕಾರಾತ್ಮಕವಾಗಿ ಸ್ಪಂದಿಸಿದೆ. ಶಮೀಮಾಳ ಕರುಣಾಜನಕ ಸ್ಥಿತಿಗೆ ಪೆಲೆಟ್ ಗನ್‌ನಿಂದ ಸಿಡಿದ ಬುಲೆಟ್ ಕಾರಣ ಎಂಬುದನ್ನು ಇಲ್ಲಿ ಉಲ್ಲೇಖಿಸಬಹುದು.





