ಮೈಸೂರಿನ ಬಳಿಕ ಕರ್ನಾಟಕದ ಈ ನಾಲ್ಕು ಸ್ಥಳಗಳಲ್ಲಿ ಅಂಚೆ ಕಚೇರಿ ಮೂಲಕ ಪಾಸ್ಪೋರ್ಟ್ ಸೇವೆ

ಬೆಂಗಳೂರು,ಫೆ.11: ಪಾಸ್ಪೋರ್ಟ್ ಮಾಡಿಸಲು ಒದ್ದಾಡುತ್ತಿರುವವರಿಗೆ ಶುಭ ಸುದ್ದಿಯೊಂದು ಇಲ್ಲಿದೆ. ರಾಜ್ಯದಲ್ಲಿ ಈಗಾಗಲೇ ಮೈಸೂರಿನ ಪ್ರಧಾನ ಅಂಚೆ ಕಚೇರಿಯಲ್ಲಿ ಪಾಸ್ಪೋರ್ಟ್ ಸೇವೆಯನ್ನು ಒದಗಿಸಲಾಗುತ್ತಿದ್ದು, ಸದ್ಯವೇ ಇನ್ನೂ ನಾಲ್ಕು ನಗರಗಳ ಪ್ರಧಾನ ಅಂಚೆ ಕಚೇರಿಗಳಲ್ಲಿ ಈ ಸೇವೆ ಆರಂಭಗೊಳ್ಳಲಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಅಂಚೆ ಇಲಾಖೆ ವಿವಿಧ ರಾಜ್ಯಗಳಲ್ಲಿಯ ಪ್ರಧಾನ ಅಂಚೆ ಕಚೇರಿಗಳನ್ನು ಪಾಸ್ಪೋರ್ಟ್ ಸೇವಾ ಕೇಂದ್ರಗಳನ್ನಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದು, ಈಗಾಗಲೇ ಪ್ರಾಯೋಗಿಕವಾಗಿ ಮೈಸೂರು ಮತ್ತು ಗುಜರಾತ್‌ನ ದಾಹೋಡ್ ಪ್ರಧಾನ ಅಂಚೆ ಕಚೇರಿಗಳಲ್ಲಿ ಈ ಸೇವೆ ಆರಂಭ ಗೊಂಡಿದೆ. ಈ ಎರಡೂ ಕೇಂದ್ರಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ.
ಸದ್ಯವೇ ರಾಜ್ಯದ ಬೆಳಗಾವಿ,ದಾವಣಗೆರೆ,ಹಾಸನ ಮತ್ತು ಗುಲ್ಬರ್ಗಾ ಸೇರಿದಂತೆ ವಿವಿಧ ರಾಜ್ಯಗಳ ಇನ್ನೂ 56 ಪ್ರಧಾನ ಅಂಚೆ ಕಚೇರಿಗಳಲ್ಲಿ ಪಾಸ್ಪೋರ್ಟ್ ಸೇವಾ ಕೇಂದ್ರಗಳನ್ನು ಆರಂಭಿಸಲು ವಿದೇಶಾಂಗ ವ್ಯವಹಾರಗಳ ಕಚೇರಿಯು ನಿರ್ಧರಿಸಿದೆ. ಇವುಗಳಲ್ಲಿ ಕೇರಳದ ಕಾಸರಗೋಡು ಮತ್ತು ಪಟ್ಟಣಂತಿಟ್ಟ ಪ್ರಧಾನ ಅಂಚೆ ಕಚೇರಿಗಳೂ ಸೇರಿವೆ.
ಸರಕಾರವು ಇತ್ತೀಚಿಗಷ್ಟೇ ಪಾಸ್‌ಪೋರ್ಟ್ ಪಡೆಯಲು ನಿಯಮಾವಳಿಗಳನ್ನು ಸಡಿಲಿಸಿದೆ. ಜೊತೆಗೆ ಪ್ರಧಾನ ಅಂಚೆ ಕಚೇರಿಗಳಲ್ಲಿ ಪಾಸ್ಪೋರ್ಟ್ ಸೇವೆ ಲಭ್ಯವಾಗು ತ್ತಿರುವುದರಿಂದ ಜನರು ಇನ್ನು ಮುಂದೆ ತಮ್ಮ ಪಾಸ್‌ಪೋರ್ಟ್‌ಗಳನ್ನು ವಿಳಂಬವಿಲ್ಲದೆ ಸುಲಭವಾಗಿ ಪಡೆಯಬಹುದಾಗಿದೆ.







