ಏಕದಿನ ರ‍್ಯಾಂಕಿಂಗ್: ದಕ್ಷಿಣ ಆಫ್ರಿಕ ನಂ.1 ತಂಡ

ದುಬೈ, ಫೆ.11: ಸೆಂಚೂರಿಯನ್‌ನಲ್ಲಿ ಕೊನೆಗೊಂಡ ಶ್ರೀಲಂಕಾ ವಿರುದ್ಧದ ಸ್ವದೇಶಿ ಸರಣಿಯಲ್ಲಿ 5-0 ಅಂತರದಿಂದ ಸರಣಿ ಗೆದ್ದುಕೊಂಡಿರುವ ದಕ್ಷಿಣ ಆಫ್ರಿಕ ತಂಡ ಐಸಿಸಿ ಏಕದಿನ ತಂಡಗಳ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನಕ್ಕೆ ಮರಳಿದೆ.
ದಕ್ಷಿಣ ಆಫ್ರಿಕ ತಂಡ ಶ್ರೀಲಂಕಾ ವಿರುದ್ಧ ಸರಣಿಗೆ ಮೊದಲು ನಂ.1 ರ‍್ಯಾಂಕಿನಲ್ಲಿದ್ದ ಆಸ್ಟ್ರೇಲಿಯಕ್ಕಿಂತ ನಾಲ್ಕು ಅಂಕ ಹಿಂದಿತ್ತು. ಆಸ್ಟ್ರೇಲಿಯ ತಂಡ ನ್ಯೂಝಿಲೆಂಡ್‌ನ ವಿರುದ್ಧ 0-2 ರಿಂದ ಸೋತಿದ್ದರೆ, ದಕ್ಷಿಣ ಆಫ್ರಿಕ ತಂಡ ಲಂಕೆಯ ವಿರುದ್ಧ 5-0 ಅಂತರದಿಂದ ಸರಣಿ ಜಯಿಸಿತ್ತು. ಒಟ್ಟು 119 ಅಂಕ ಗಳಿಸಿರುವ ಆಫ್ರಿಕ ತಂಡ ವಿಶ್ವ ಚಾಂಪಿಯನ್ ಆಸ್ಟ್ರೇಲಿಯವನ್ನು ಹಿಂದಕ್ಕೆ ತಳ್ಳಿ ಅಗ್ರ ಸ್ಥಾನಕ್ಕೆ ವಾಪಸಾಗಿದೆ.
ಇದೇ ವೇಳೆ, 112 ಅಂಕ ಹೊಂದಿರುವ ಭಾರತ ಏಕದಿನ ತಂಡ ರ‍್ಯಾಂಕಿಂಗ್ನಲ್ಲಿ ನಾಲ್ಕನೆ ಸ್ಥಾನದಲ್ಲಿದೆ. ನ್ಯೂಝಿಲೆಂಡ್(113 ಅಂಕ) ಮೂರನೆ ಸ್ಥಾನದಲ್ಲಿದೆ.
‘‘ಐಸಿಸಿ ಏಕದಿನ ರ‍್ಯಾಂಕಿಂಗ್ನಲ್ಲಿ ಅಗ್ರ ಸ್ಥಾನಕ್ಕೆ ವಾಪಸಾಗಿರುವುದಕ್ಕೆ ನಮಗೆ ತುಂಬಾ ಸಂತೋಷವಾಗಿದೆ. ವಿಶ್ವಕಪ್ ಬಳಿಕ ಕಳೆದ ಎರಡು ವರ್ಷಗಳಲ್ಲಿ ನಮ್ಮ ತಂಡ ಟ್ರಯಲ್ಸ್ ಮಾಡಿದ್ದು, ಏಕದಿನ ಕ್ರಿಕೆಟ್‌ನಲ್ಲಿ ಫಾರ್ಮ್ ಹಾಗೂ ಸ್ಥಿರತೆ ಕಾಪಾಡಿಕೊಳ್ಳಲು ಪ್ರಯತ್ನ ನಡೆಸಿದ್ದೇವೆ’’ ಎಂದು ದಕ್ಷಿಣ ಆಫ್ರಿಕದ ನಾಯಕ ಎಬಿಡಿವಿಲಿಯರ್ಸ್ ಹೇಳಿದ್ದಾರೆ.
ದ.ಆಫ್ರಿಕ 2014ರ ನವೆಂಬರ್‌ನಲ್ಲಿ ಕೊನೆಯ ಬಾರಿ ನಂ.1 ಸ್ಥಾನ ತಲುಪಿತ್ತು. 2002ರಲ್ಲಿ ಈಗಿನ ರ‍್ಯಾಂಕಿನ ವ್ಯವಸ್ಥೆ ಆರಂಭವಾದ ಬಳಿಕ ದಕ್ಷಿಣ ಆಫ್ರಿಕ ಐದನೆ ಬಾರಿ ನಂ.1 ಸ್ಥಾನ ತಲುಪಿದೆ. ಫೆ.2007, ಮಾರ್ಚ್-ಮೇ 2008, ಜನವರಿ-ಆಗಸ್ಟ್ 2009 ಹಾಗೂ ಅಕ್ಟೋಬರ್-ನವೆಂಬರ್ 2014ರಲ್ಲಿ ನಂ.1 ಸ್ಥಾನಕ್ಕೆ ತಲುಪಿದೆ.







